Google Search

Custom Search

Thursday, December 29, 2011

ನಲಿದಾಡುತಿರುವೆ...


ನಗುವ ಮರೆತ ಯುಗದಲಿ
ಕಾದ ಕಡಲಾಗಿದ್ದೆ ನಾನು,
ಅಂದದರಸಿಯ ಚೆಂದದ ನಗುವ ಕಂಡೆ,
ಕಾದು ಕುಳಿತಿದ್ದ ಸಮಯವ ಮರೆತು
ನಿನ್ನ ನಗೆಯಲ್ಲೇ ನಲಿದಾಡುತಿರುವೆ...||

ಕಡಲೊಡಲಿನ ಕಪ್ಪೆಚಿಪ್ಪಲಿ
ಸ್ವಾತಿ ಮಳೆಹನಿಯ ಮುತ್ತು,
ಮುತ್ತು ಮುತ್ತುಗಳೊಂದೊಂದು
ಮತ್ತೊಂದರೊಡನೆ ಬೆರೆತ
ನಗುವ ಮುತ್ತಿನ ಹಾರದಲೆ ನಲಿದಾಡುತಿರುವೆ...||

ತಿಳಿ ಹಾಲ ಕೊಳದಲ್ಲಿ,
ತಡ ಜಾವದಲಿ ಮಿಂದು
ಮಡಿಯುಡುಗೆಯಲಿ ಬಂದ
ಶ್ವೇತ ಸುಂದರಿ ನಿನ್ನ
ಹಾಲ್ಗಲ್ಲದ ನಗುವಲ್ಲೇ ನಲಿದಾಡುತಿರುವೆ...||

Friday, December 23, 2011

ಕನಸು...


ನಂದು ಇಂದುಗಳೆಲ್ಲಾ
ಎಂದೋ ಕಂಡ ಕನಸು,
ಮುಂದು ಯಾರೆಂದು
ಕಾಣಬೇಕಿದೆ ಇಂದು ಕನಸು ||

ಹಿಂದಾದರಾಗಲಿ
ಇಂದಾದರಾಗಲಿ
ಮುಂದಾದರಾಗಲಿ
ಕಂಡ ಕನಸೆಂದೆಂದು ಮಧುರ ||

ಹಿಂದೆ ನಂದು ಬಂದಳು
ಇಂದು ಇಂದು,
ಮುಂದೆ ಬರಬಹದು ವಂದು
ಕಂಡ ಕನಸೆಂದೆಂದು ಮಧುರ ||

ನಂದು ನನ್ನವಳಲ್ಲ
ಇಂದು ಇರಲು ಬರಲಿಲ್ಲ,
ಮುಂದೆ ಬರುವವಳ ಬಗ್ಗೆ ತಿಳಿದಿಲ್ಲ
ಕಂಡ ಕನಸೆಂದೆಂದು ಮಧುರ ||

ಹಿಂದೆ ತಡೆದವರಿಲ್ಲ,
ಇಂದಿನ ಅರಿವು ಎಮಗಿಲ್ಲ,
ಮುಂದೆ ತಡೆಯುವರಿಲ್ಲ,
ಕನಸು ನಿನ್ನದು ಗೆಳೆಯ,
ಕನಸ ಕಾಣಲು ಬೇಕಿಲ್ಲ ಕಾಸು,
ಸವಿಯ ಸವಿಯಲು ಮಾತ್ರ ಕನಸು
ಕನಸೇ ಜೀವನವಲ್ಲ
ಕಂಡ ಕನಸೆಂದೆಂದು ಮಧುರ ||

ಕಣ್ಣು ...


ಪದವೇ, ಪದವಿಯೇತಕೆ ಬೇಕೇ
ಪ್ರೀತಿ ಪಾರಾಯಣಕೆ?
ನೀನೊಬ್ಬಳೆ ಸಾಕು, ಪದಗಳ ರಾಶಿ
ಅಡಗಿರಲು ನಿನ್ನ ಕಂಗಳಲಿ ||

ಕಣ್ಣನೋದುವ ಕಲೆಯ
ಅರಿತಿರುವ ಪದವೇ,
ಸಪ್ತ ಸಾಗರಗಳೆ
ಉಬ್ಬು ತಗ್ಗುಗಳು ನಿನ್ನ ಕಂಗಳಲಿ ||

ಕಪ್ಪು ಬಿಳುಪುಗಳೆರಡು
ಬರಿಯ ಬಣ್ಣಗಳಲ್ಲ,
ಕಪ್ಪು ಬಿಳುಪುಗಳೇ
ಹಗಲು ರಾತ್ರಿಗಳೆನಗೆ ನಿನ್ನ ಕಂಗಳಲಿ ||

Wednesday, December 21, 2011

ಹುಸಿಮುನಿಸು...


ಅನಿಸುತಿದೆ ಏಕೋ ಗೆಳತಿ
ಹುಸಿಮುನಿಸು ನಿನ್ನದೆಂದು,
ಮತ್ತೆ ಮತ್ತೆ ನೋಡಬೇಕೆನಿಸಿದೆ
ಆ ನಿನ್ನ ಹುಸಿನಗುವನಿಂದು||

ತಡಮಾಡದೆ ಬಾ ಗೆಳತಿ
ಮಿಲನ ಮಹೋತ್ಸವಕೆಂದು,
ಗೌರಿಶಂಕರವೀವಿರಹ ತುಡಿಯುತಿದೆ
ತುದಿಗಾಲಲಿ ನಿನ್ನ ಸೇರಲೆಂದು||

ಒಂದು ಮಧುರ ಕ್ಷಣದಿ
ಎಂದೂ ಕಾಣದ ಚಿತ್ತಾರ,
ಕಂಡೆ ನಾ ಎನ್ನಂತರಂಗದಿ
ಹುಸಿಮುನಿಸ ಮುರಿಯೆಲೆ ಮುದ್ದು ಗೆಳತಿ||


ಸರಸ ವಿರಸಗಳೆರಡು
ಒಲವ ಅವಳಿಗಳು,
ಉಳಿದ ತೊಳಲಾಟಗಳು
ಸುಮಧುರ ಕೋಮಲ ಕುಸುಮಗಳು
ಹುಸಿಮುನಿಸ ಮುರಿಯೆಲೆ ಮುದ್ದು ಗೆಳತಿ||

Tuesday, December 20, 2011

ಏಕಾಂತ...


ಬೆಳದಿಂಗಳ ನಡು ರಾತ್ರಿಯಲಿ,
ನಿನ್ನ ನಡುವಿನ ಮಡಿಲಲ್ಲಿ,
ನಡುವೆ ಅಂತರವಿಲ್ಲದೆ
ಏಕಾಂತದಲ್ಲಿ ನಾನು-ನೀನು||

ಆಗಸದ ತಾರೆಗಳು ಬೆರಳ ತುದಿಯಲ್ಲಿ,
ಒಣಗಿದೆಲೆಗಳ ಮೃದು ಹಾಸಿನಲ್ಲಿ,
ತಂಗಾಳಿ ತಲೆದೂಗಿಸುವ ಬಿಸಿಯುಸಿರ ಶಾಖದಲಿ,
ಹರಿವ ನೀರಂತೆ ಬಳುಕುವ ನೀರೆ
ಏಕಾಂತದಲ್ಲಿ ನಾನು-ನೀನು||

ಕರಗುವ ಮುಂಜಾನೆ ಮಂಜಲ್ಲಿ,
ಕರಗಿರುವೆ ನಾನು ನಿನ್ನಲ್ಲಿ,
ಸವಿಯುವ ನಿನ್ನೊಲವ ಸವಿಯಲ್ಲಿ,
ಇಡೀ ವಿಶ್ವ ಮರೆಯುವೆ, ಮರೆಸುವೆ
ಏಕಾಂತದಲ್ಲಿ ನಾನು-ನೀನು||

ಏಕಾಂಗಿಯ ಏಕಾಂತ...


ಹಸಿರ ಕಾನನದ ನಡುವಲ್ಲಿ,
ನಟ್ಟ ನಡು ರಾತ್ರಿಯಲಿ,
ಮೈ ಕೊರೆವ ಚಳಿಯಲ್ಲಿ,
ಬಿರುಗಾಳಿಯ ಅರಿವಿಲ್ಲ ಗೆಳತಿ,
ಏಕಾಂಗಿಯ ಏಕಾಂತದಲ್ಲಿ||

ತಾರೆಗಳ ಎಣಿಸುವು ಖುಷಿಯಿಲ್ಲ,
ಒಣಗಿದೆಲೆಗಳ ಶಬ್ದ ಹಿತವಿಲ್ಲ,
ಮಿತವಾಗಿ ಬೀಸುತಿಹ ತಂಗಾಳಿ ತಂಪಿಲ್ಲ,
ಹರಿವ ನದಿ ನೀರಾಗಿ ಉಳಿದಿಲ್ಲ ಗೆಳತಿ,
ಏಕಾಂಗಿಯ ಏಕಾಂತದಲ್ಲಿ||

ಮುಂಜಾನೆ ಮಂಜು ಕಾರುತಿದೆ ಕಾವು,
ನೆನಪುಗಳ ನೆನದ ಮನಕೆ ನೋವು,
ನಿನಗಾಗಿ ಕಾದ ಸೂರ್ಯೋದಯಗಳೆಲ್ಲ ಕಹಿಬೇವು,
ನಿದ್ರೆಗಳಿಲ್ಲದ ರಾತ್ರಿ, ದೇಹ ಬಯಸಿದೆ ಸಾವು, ಗೆಳತಿ,
ಏಕಾಂಗಿಯ ಏಕಾಂತದಲ್ಲಿ||

ಸವಿ...


ಕಡಲ ತಡಿಯಲಿ ಕಾದಿರುವೆ ಗೆಳತಿ,
ಓಡೋಡಿ ಬಂದು ಎನ್ನ ಅಡಿಗೆರಗದೆ,
ಎದೆಗಪ್ಪಿ ಕೂರುವೆಯಾ ಒಮ್ಮೆ ನೀನು...??

ಬೆಳದಿಂಗಳಿರುಳಲ್ಲಿ, ತಿಳಿಯ ತಂಗಾಳಿ,
ಕಡಲ ಅಲೆಗಳ ತೆಳು ಸ್ಪರ್ಶದಲಿ,
ಕೈ ಹಿಡಿದು ನಡೆಯುತಾ,
ಒಲವ ಸವಿಯೋಣ ಒಲವ ಒಡತಿ...

ದಡದ ಮಡಿಲಲ್ಲಿ,
ಮಡಿಗೊಂಡ ಬಗೆಯಲ್ಲಿ,
ಅಡಿಗಡಿಗೆ ಹೊರಳಾಡಿ,
ಏಕಾಂತ ಸವಿಯೋಣ ಗೆಳತಿ... :)