Google Search

Custom Search

Monday, March 19, 2012

ಸುಂದರಾಂಗಿ...


ಮುಗಿಲೊಂದು ಬಾನಿನಲಿ,
ತನಗ್ಯಾರು ಮಿಗಿಲೆಂದು
ಮೊಗದಲ್ಲಿ ನಗೆ ಹರಿಸಿರಲು,
ಇಂದ್ರಧನಸಿನ ಮೇಲಿಂದ  ಧರೆಗಿಳಿದೆ
ಸುರಗಂಗೆ ನೀನು ಸುಂದರಾಂಗಿ...

ಮರಳು ಹರಳಾಗಿ
ಥರ-ಥರದೆ ಹೊರಳಾಡಿ
ಚಿತ್ತಾರ ಬಿಡಿಸಿರೆ ಮರಳುಗಾಡಲಿ,
ಹರಳೆಂಬ ಮರಳನ್ನ ಹಿಡಿ-ಹಿಡಿದು
ಪೋಣಿಸಲು, ನೀನಾದೆ ಸುಂದರಾಂಗಿ.  


ಜೀವವಾಯುವ ಹರಿಸಿ,
ನೋವ ತನ್ನಲೆ ಇರಿಸಿ,
ಕಾವ ಕರದಲೆ ಉಳಿಸಿ,
ತಂಪನುಣಿಸುವ ಬಳ್ಳಿ ಬಡವಾಯ್ತು
ನಡೆದಾಡುವ ಬಳ್ಳಿ ನೀ ಸುಂದರಾಂಗಿ...

ಉತ್ತರದ ಕಡೆಯಿಂದ
ಎತ್ತರದ ನಾಡಿಂದ
ಬಿತ್ತರದ ಹಾದಿಯಲಿ
ನೆತ್ತರತ್ತಿತ್ತ ಚಿಮ್ಮಿಸಿ ಬರುತಿರಲು ನಾ,
ಕಂಡ ಬೆಳದಿಂಗಳೆ ನೀನಲ್ಲವೇ ಸುಂದರಾಂಗಿ???

ಸಪ್ತ ಸಾಗರಗಳೆಲ್ಲ
ಒಟ್ಟಾಗಿ ಸೇರಿದರು,
ಸುತ್ತ ಎತ್ತೆತ್ತಲೋ
ಸ್ವತ್ತು ಕರಗಿಸಿ ಹುಡುಕಿದರು
ಸಿಗದ ಸೌಂದರ್ಯ ನಿನ್ನದು ಸುರ ಸುಂದರಾಂಗಿ...