Google Search

Custom Search

Saturday, May 5, 2012

ಹೊಸತು...


ಹೊಸತಲ್ಲಿ ಮಾತ್ರವೆ
ಹೊಸದು ಎಲ್ಲವು...
ಏನಾದರಾಗಲಿ
ಯಾವುದಾದರು ಇರಲಿ,
ಹೊಸತಲ್ಲಿ ಮಾತ್ರವೇ
ಹೊಸದು ಈ ಜಗದಲ್ಲಿ...

ಹೊಸತು ಗೆಳೆತನವಿಂದು,
ಹಳಸಿ ಹಳತಾಗುವುದು ಮರುಕ್ಷಣ...

ಹೊಸತು ಪ್ರೇಮವು ಇಂದು,
ಮನಸವೆಸಿ ಹಳತಾಗುವುದು ಮರುಘಳಿಗೆ...

ಹೊಸತು ವಿವಾಹವು ಇಂದು,
ಬೆವರ್ಹರಿಸಿ ಹಳತಾಗುವುದು ಮರುದಿನ...

ಹೊಸತು ವಸ್ತುವು ಇಂದು,
ಮಾಸಿ ಹಳತಾಗುವುದು ನಾಳೆ...

ಇಂದಿನ ಎಲ್ಲ ಹೊಸತುಗಳು,
ಮುಂದೊಮ್ಮೆ ಹಳತುಗಳೇ...
ಇಂದು ಮುಂದಿನ ನಡುವೆ
ಮಂದಗತಿಯಲಿ ಚಲನೆ...
ಒಂದೇ ದಿನದಲಿ ಎಲ್ಲವನು ಬಯಸಿ,
ಬೆಂದು ಬರಡಾಗದಿರು,
ಹೊಸತ ಅರಸಿರುವ
ನವ ಕಲ್ಪನಾವಿಹಾರಿ... ||

ಕಾಣೆಯಾದವರು...


ಕಾಣೆಯಾದವರೆ ಎಲ್ಲರು
ಕಣ್ಣೆದುರಿಗಿರುವರು...
ಕೂಗಳತೆಯ ದೂರದಲಿದ್ದು
ಕೂಗಿದರು ಕೇಳದ
ಕಿವುಡರವರು....

ಕಣ್ಣು ಹೇಳುವ ಸತ್ಯ
ಮನಸು ಒಪ್ಪದು ನಿತ್ಯ
ಕಾಣೆಯಾದವರೆ ಎಲ್ಲರು
ಕಣ್ಣೆದುರಿಗಿರುವರು
ಕಾಣೆಯಾಗಿರುವರು
ಮನದಾಳದ ಮೆಲುಕಿನಿಂದ...

ಕಣ್ಣೊಂದು ಹೇಳುತಿದೆ
ಕಿವಿಯೊಂದು ಕೇಳುತಿದೆ
ತುಟಿಯೊಂದು ನುಡಿಯುತಿದೆ
ಒಪ್ಪಲಾರದು ಮನಸು
ತಪ್ಪ ಕ್ಷಮಿಸಲು ಒಮ್ಮೆ...
ಕಾಣೆಯಾದವರೆ ಎಲ್ಲರು
ಕಣ್ಣೆದುರಿಗಿರುವರು...

Friday, May 4, 2012

ಸಾಧಕ....


ಅರ್ಥವಾಗದ ಮಾತು
ಎಷ್ಟು ಆಡಿದರೇನು??

ವ್ಯರ್ಥವಾಗುವ ಸಮಯ
ಮತ್ತೆ ಪಡೆಯುವೆಯೇನು??

ಸ್ವಾರ್ಥವಿಲ್ಲದ ಮನಸ
ಬೆಳೆಸಿ ಪೋಷಿಸಲೇನು?

ಇಷ್ಟಾರ್ಥ ಸಾಧಿಸಲು
ಕಷ್ಟ ಅನುಭವಿಸುವೆಯೇನು?

ಕರ್ತವ್ಯ ನಿಷ್ಟೆಯಲಿ
ಕಾಯಕವ ಮುಗಿಸುವೆಯೇನು?

ಅನರ್ಥವಾಗಿಸದೆ ಬದುಕ
ಮುಂದೆ ಸಾಗಿಸು ನೀನು...

ಸಮಯ ಸಾಧಕನಾಗು,
ಅನರ್ಥಗಳ ಅರ್ಥವನರಿತು,
ಸ್ವಾರ್ಥವನು ವ್ಯರ್ಥವಾಗಿಸಿ,
ಕಷ್ಟದಿಂದಲಿ ಇಷ್ಟಾರ್ಥ ಸಾಧಿಸಿ
ಜನಿಸಿದ ಜೀವ ಕೊಂಚವಾದರೂ
ಕರ್ತವ್ಯ ಪಾಲಿಸಿ.. ಸಮಯ ಸಾಧಕನಾಗು...||

Thursday, May 3, 2012

ಹೊಂಬೆಳಕು...


ಅರಳುತಿದೆ ಮನದ ಮೂಲೆಯಲಿ
ಚಿಗುರೊಡೆದ ಸುಂದರ ಕನಸೊಂದು...
ಮರಳುಗಾಡಾದರು ನಿನ್ನ ನೆಲೆ,
ನನ್ನ ಕನಸಿಗೆ ನಿನ್ನ ಪ್ರೀತಿ, ಸಿಹಿನೀರಿನ ಸೆಲೆ..

ಎತ್ತ ನೋಡಲು ನಾನು
ಸುತ್ತಲೂ ನಿನ್ನದೆ ಛಾಯೆ,
ಮತ್ತಾಗಿಸುವುದಾದರು ನಿನ್ನ ಗುಣ,
ಮುತ್ತನುಣಿಸಿದೆ ಮುದ್ದು ಮನಕೆ...

ಚಿತ್ತ ಚಾಂಚಲ್ಯದಲಿ
ಭಿತ್ತಿ-ಹೊತ್ತಗೆಯಲ್ಲಿ
ಹೊತ್ತು ಮುಳುಗಿದರೂ
ನೆತ್ತಿ ನೇರಕಿರುವೆ ನೀ ಹೊಂಬೆಳಕಂತೆ...