Google Search

Custom Search

Sunday, October 28, 2012

ಮತ್ತೆ ವಾಲುತಿದೆ ಮನಸು...


ಮತ್ತೆ ವಾಲುತಿದೆ ಮನಸು ನಿನ್ನೆಡೆಗೆ,
ಏನು ಮೋಡಿಯೋ ಆ ಜೋಡಿ ಕಂಗಳಲಿ,
ಎತ್ತ ನೋಡಬೇಕೆನಿಸಿದರು ನನಗೆ,
ಸುತ್ತಲೂ ಆ ಎರಡು ಕಣ್ಣುಗಳೇ,
ಸತ್ತು ಬದುಕುತಿದೆ ಮನಸು ಮುತ್ತನಿಡಲು
ಆ ಜೋಡಿ ಕಂಗಳಿಗೆ.....

ನಡು ದಾರಿಯಲೂ ಕಾಣದಾಗಿದೆ ದಿಕ್ಕು,
ಕಡಲಂತೆ ಕಾಣುತಿದೆ ನಡೆವ ಹಾದಿ,
ಕಿಡಿಯೊಂದು ಹೊತ್ತಿದೆ ನಿನ್ನ ಕಣ್ಣುಗಳಿಂದ,
ಸುಡುತಿದೆ ಎನ್ನೊಡಲ ನುಡಿಯಲಾದೆನು ನಾ,
ಕೊಡುವೆನೊಂದು ಸಿಹಿ ಮುತ್ತನು
ಆ ಜೋಡಿ ಕಂಗಳಿಗೆ.....

ಮೆಲ್ಲ ಮೆಲ್ಲನೆ ನಲ್ಲನ ಕೊಲ್ಲುತಿವೆ ಕಣ್ಣುಗಳು,
ಮಲ್ಲಿಗೆಯ ಪರಿಮಳವು ಮಾಯವಾಗಿದೆ,
ಎಲ್ಲಿರುವೆನೋ ನಾನು ಅರಿವಿಲ್ಲವಾಗಿದೆ,
ಅಲ್ಲಿ ನೋಡಿದ ಆ ಜೋಡಿ ಕಣ್ಣುಗಳು,
ಎಲ್ಲ ಜಗವನು ಮರೆಸಿ ತನ್ನತ್ತ ಸೆಳೆದಿವೆ,
ಒಲ್ಲೆಯೆಂದರು ಒಮ್ಮೆ ಮುತ್ತನಿಡುವೆ
ಆ ಜೋಡಿ ಕಂಗಳಿಗೆ....

Wednesday, October 24, 2012

ಬೆತ್ತಲೆ...


ವಸ್ತ್ರದಿಂದಲೇ ನಿನ್ನ ಸೊಬಗು ಹಿರಿದಾಗಿದೆ,
ಅಸ್ತ್ರವಾಗಿದೆ ವಸ್ತ್ರ ಈ ಜಗದೊಳಗೆ,
ವಾಸ್ತವದಲಿ ನಿರ್ವಾಣವಾದರೆ ಬರಿಯ ನಗ್ನ ಜೀವ,
ವಸ್ತ್ರವಿಲ್ಲದ ನಗ್ನತೆಯಲಿ ಎಲ್ಲರೂ ಒಂದೇ,
ಬೆತ್ತಲಾಗುತಿರುವಳು ಧರಣಿ ಕಣ್ಣಮುಂದೆ...

ನಾಡ ಕಟ್ಟುವ ನೆಪದಲಿ ಸುಟ್ಟ
ಕಾಡ ಮರಗಳೆಷ್ಟೋ ನಾಡ ಚಿಗುರುಗಳೆಷ್ಟೋ,
ಬೇಡದಿದ್ದರೂ ನೀಡಿಹಳು ಬಯಸಿದ್ದೆಲ್ಲವನು,
ಬೇಡರಂತೇಕೆ ಕಿತ್ತು ತಿನ್ನುವಿರವಳ???
ಬೆತ್ತಲಾಗುತಿರುವಳು ಧರಣಿ ಕಣ್ಣಮುಂದೆ...

ಹಚ್ಚ ಹಸುರಿನ ಗಿರಿ-ಮರಗಳ ಸೀರೆಯನುಟ್ಟು,
ಹೊಚ್ಚ ಹೊಸ ಜೀವಕೆ ಪ್ರಾಣವನಿಟ್ಟು,
ಸ್ವಚ್ಚ ಸೌಗಂಧ ಗಾಳಿಯ ನಿನಗೆ ಕೊಟ್ಟು,
ಉಚ್ಚ  ಸ್ಥಾನದಲಿಟ್ಟಿಹಳು ನಿನ್ನ...
ತುಚ್ಛ ಆಸೆಗಳಿಂದ ಹರಿದಿರುವೆ ಅವಳುಡುಗೆ,
ಬೆತ್ತಲಾಗುತಿರುವಳು ಧರಣಿ ಕಣ್ಣಮುಂದೆ...

ಕೊನೆಯತನಕ...


ಅವಿತು ಕುಳಿತಿರುವೆ ನೀ ಮನದ ಆಳದಲಿ,
ಕವಿತೆ ಗೀಚಿರುವೆ ನಾ ಗಾಳಿಯ ಹಾಳೆಯಲಿ,
ಚಿರತೆಯ ವೇಗವಿದೆ ಈ ಪ್ರೀತಿಯ ಲೇಖನಿಯಲಿ,
ಕೊರತೆಯೇನಿದೆ ಹೇಳೇ ಗೆಳತಿ ನನ್ನ ಪ್ರೀತಿಯಲಿ?
ಒಮ್ಮೆ ಒಪ್ಪಿದರೆ ಸಾಕೆ ಬಿಡೆನಿನ್ನ ಕೊನೆಯತನಕ...

ಕಳೆದ ಕಾಲದ ಆ ಕಹಿ ನೆನಪುಗಳ
ಕಾಲಾಂತರಾಳದಲಿ ಕೊರೆದು ಅಡಗಿಸಿಡು,
ಕಳೆಯೋಣ ಬರುವ ಕಾಲವನು
ಕನಕದಂಬಾರಿಯಲಿ ಕುಳಿತು,
ಒಮ್ಮೆ ಒಪ್ಪಿದರೆ ಸಾಕೆ ಬಿಡೆನಿನ್ನ ಕೊನೆಯತನಕ...

ಕನಸ ಕಂಡಿಹೆನಂದು ನೀ ಒಪ್ಪಿದೆಯೆಂದು,
ಮನಸಲೆಂದೆಂದು ಅನಿಸಿಲ್ಲ ನನಸಾಗುವುದೆಂದು,
ಕನಸು ಕಾಣುವವನು ಕನಸುಗಾರ,
ಕನಸುಗಾರನು ನಾನಲ್ಲ, ಕನಸೆಂದು ಕಂಡಿಲ್ಲ ಗೆಳತಿ,
ಕನಸಲ್ಲೇ ಕಂಡೆ ನಾ ಸೌಂದರ್ಯ ರಾಶಿಯನು
ಒಪ್ಪಿಸಿಕೋ ನಿನ್ನ, ಅಪ್ಪುವೆನು ಚಿನ್ನ...
ಒಮ್ಮೆ ಒಪ್ಪಿದರೆ ಸಾಕೆ ಬಿಡೆನಿನ್ನ ಕೊನೆಯತನಕ...

Wednesday, October 17, 2012

ಕನ್ನಡತಿ....


ಕರುಣದಲಿ ನೋಡೆ ಕಮಲನಯನೆ,
ಕರುನಾಡ ಕನ್ನಡ ಕುವರ ನಾನಿರುವೆ,
ಹೊರನಾಡ ಹೊಲಸು ಹಂದಿಗಳೇಕೆ ನಿನಗೆ,
ಚರಣದಾಸಿಯಾಗಬೇಕಿಲ್ಲ ನನಗೆ, ಹರುಷದಿಂದಲಿ ಪ್ರೀತಿಯ
ಹೂರಣವ ಉಣಿಸಿದರೆ ಸಾಕು ಮುದ್ದು ಮನಕೆ...

ಬೆಳ್ಳನೆಯದೆಲ್ಲಾ ಎಂದಿಗೂ ಹಾಲಲ್ಲ.
ಬೆಳ್ಳಗೇ ಬೆಳಗುವುದು ತಿಳಿಯ ಸುಣ್ಣದ ನೀರು,
ಬೆಳ್ಳಿ ಬೆಳಕಿನ ಚಂದ್ರ ಕಡುಗತ್ತಲಲೇ
ಹೊಳೆಯುವನು, ಹಾಲ ಶರಧಿಯಲಿ ಅದು ಬರಿಯ ಬಿಂಬ,
ಬೆಣ್ಣೆ ಸುಣ್ಣದ ಅಂತರ ಅರಿತರೆ ಸಾಕು ಮುದ್ದು ಮನಕೆ...

ಕಡುಕಪ್ಪು ಬಣ್ಣವೇ ಕಠಿಣ ವಜ್ರದ್ದು,
ಕಡೆದು ತೀಡಿದಮೇಲೆ ಆಳದಲಿ ಸಿಗುವುದು,
ಕಡೆಗಣಿಸದಿರು ಕಪ್ಪೆಂದು ನನ್ನ,
ಕಡೆಗಳಿಯವರೆಗೂ ಕೊಡೆಯಡಿಯಲಿ ನಿನ್ನ
ಕೈಹಿಡಿದು ನಡೆಸುವೆ ಓ ಕನ್ನಡದ ಹೆಣ್ಣೇ,
ಕನ್ನಡವೇ ನನ್ನುಸಿರು ಕರುನಾಡು ಕಲ್ಪತರು,
ಇಚ್ಛೆಯಿಂದಲಿ ಸ್ವಚ್ಚ ಕನ್ನಡತಿ ನೀನಾದರೆ ಸಾಕು ಮುದ್ದು ಮನಕೆ...