Google Search

Custom Search

Saturday, June 27, 2009

ಜಗತ್ಸುಂದರಿ....

ಕೆಂಡ ಸಂಪಿಗೆ ಮುಂದೆ ಭಂಡ ಧೈರ್ಯವೇ ಮನವೇ?
ಸಡಿಲಾಗಿಸೆ ಗೆಳತಿ ಒಡಲ, ಒಳಗೆ ಬರುವೆ.

ಸಂಜೆ ಕೆಂಪಿನ ರೌದ್ರಕೆ ಅಂಜಿಲ್ಲವೇ ಮನವೇ?
ಬಾಂದಳದ ಭಾರಿ ಅಂಗಳಕೆ ತೇರ ತರುವೆ. 

ಮಂದಗಾಮಿನಿ ಮೊಗದೆ ಬೆಂದ ಛಾಯೆಯೇ ಮನವೇ?
ಚಂದದೂರಿಗೆ ಅರಸಿ ತಾಳು ಒಂದೇ ಕ್ಷಣವೆ.

ಅರಳಿದಾನನಕೆ ಕೆರಳಿದಾ ಲೇಪ ಮನವೇ,
ಸರ್ವ ಜಗ ಸುಂದರಿಗೆ ಗರ್ವ ಬರವೇ?

ಭಿತ್ತಿ ಭಿತ್ತಿಯಲಿ ಚಿತ್ತದ ಚಿತ್ರ ಮನವೇ, 
ಸಾಟಿಯಾರಿಹರೆ ಘಾಟಿ, ನೀನೆ ವಿಶ್ವ ಚೆಲುವೆ.

Friday, June 12, 2009

ಮೊದಲ ಮಿಲನ...

ಒಮ್ಮೆ ನಾಟಿತು ನಿನ್ನಲಿ ದೃಷ್ಟಿ ,
ಮುಷ್ಟಿ ಮನದಲಿ ಪ್ರೇಮ ಸೃಷ್ಟಿ,
ನಿನ್ ನಗೆಯಲಿ ಹರಿಯಿತು ಪ್ರೇಮ ವೃಷ್ಟಿ,
ನಂದಿದ ದೀಪದಲಿ ಒಂದಾದೆ ಗೆಳತಿ...

ಕೆನ್ನೆ ಕೆಂಪೇರಿತು ಮೊದಲ ಸಂಜೆ,
ಮೊನ್ನೆ ಜಿಂಕೆ ಕಣ್ಣಲಿ ಸನ್ನೆ,
ನೆನ್ನೆ ನೀನಾದೆ ಮನದನ್ನೆ ,
ನಂದಿದ ದೀಪದಲಿ ಒಂದಾದೆ ಗೆಳತಿ...

ಜೇನ್ತುಟಿ ನಡುಗಿತು ಅಂದು,
ಜೋಡಿಜೀವ ಅರಳಿತು ಬೆಂದು ,
ಮುದ್ದು-ಮನಕೆ ಮರೆಯಾದೆ ಯಾಕಿಂದು?
ನಂದಿದ ದೀಪದಲಿ ಒಂದಾದೆ ಗೆಳತಿ...

Tuesday, June 2, 2009

ಒಲವು....

ಕಡಲ ಅಲೆಗಳ ಏರಿಳಿತ,
ಏನೀ ಸಲಿಗೆಯ ಸೆಳೆತ,
ಮಿಡಿವ ಮನಸಿನ ಭಾವ ಮಿಡಿತ,
ನನ್ನ ಒಲವಿನ ಸ್ನೇಹಿತ.

ನನ್ನೀ ಹೆಸರಿಗೆ ನೀನೆ ಅಂಕಿತ,
ಸತತ ಸಹಿಸಿದೆ ನಿನ್ನ ಕೊರೆತ,
ನನ್ನ ಎದೆಯಲಿ ಸದಾ ಶಾಶ್ವತ,
ನನ್ನ ಒಲವಿನ ಸ್ನೇಹಿತ.

ನನ್ನ ಎದುರಿಗೆ ಒಮ್ಮೆ ಸೋತ,
ಮೆಲ್ಲ ಬಂದು ಒಳಗೆ ಕೂತ,
ಉಸಿರಲಿ-ಉಸಿರಾಗಿ ಬೆರೆತ,
ನನ್ನ ಒಲವಿನ ಸ್ನೇಹಿತ.


ಇದು ನನ್ನ ಆತ್ಮೀಯ/ಪ್ರೀತಿಯ ಗೆಳೆಯ/ಗೆಳತಿಯರಿಗೆ ಅರ್ಪಿತ...;) ;) ;) ☺ ☺ ☺ ...

Saturday, May 30, 2009

ಕಾದಿರುವೆ....

ಮನಸಲಿ ಮೂಡಿದೆ,
ಕನಸಲಿ ಕಾಡಿದೆ,
ನೆನಪಲೆ ನೊಂದೆ,
ಹಗಲಲಿ ಕಾಣದೆ
ಮರೆಯಾದೆ, ಕಾದಿರುವೆ ಗೆಳತಿ....

ದೂರದ ತೀರದಿ,
ತೀರದ ಬಯಕೆಯ,
ಆರದ ಆಸೆಯ,
ಮಾಗದ ನೋವಿನ
ಜೊತೆ, ಕಾದಿರುವೆ ಗೆಳತಿ....

ಕೊಲ್ಲುವ ನೋಟದೆ,
ಮೆಲ್ಲನೆ ನೋಡಿದೆ,
ಸುಳ್ಳಿನ ಆಟದೆ,
ಕಳ್ಳನ ಕರಗಿಸಿ
ಮೆರೆದೆ, ಕಾದಿರುವೆ ಗೆಳತಿ....

Tuesday, May 19, 2009

ನೀನಲ್ಲವೇ...???

ಮರದೆ ಮಿರುಗಿದ ಮಂದ ಗಾಳಿ ,
ಮೆಲ್ಲನೆ ತೇಲಿದ ತಂಗಾಳಿ,
ಸುರುಳಿ ಸುಂದರಿ ಸುಂಟರಗಾಳಿ,
ನೀನಲ್ಲವೇ ನನಗೆ ಗೆಳತಿ?

ಮೇಘ ಸಂಗಮದ ತುಂತುರು ಮಳೆ ಹನಿ,
ಹರಿವ ಕಾವೇರಿಯ ಸಿಹಿ ನೀರ ಹನಿ,
ಸಾಗರದಲೆಗಳ ನೀಲ ನೀರ ಹನಿ,
ನೀನಲ್ಲವೇ ನನಗೆ ಗೆಳತಿ?

ಹಣತೆಯ ಬೆಳಕಿನ ಹೊಳಪು,
ಚಂದ್ರನ ಬೆಳದಿಂಗಳ ತಂಪು,
ಸೂರ್ಯನ ಕಿರಣದ ನುಣುಪು,
ನೀನಲ್ಲವೇ ನನಗೆ ಗೆಳತಿ?

ಮನೆಯ ಬೆಳಗುವ ಕಿಚ್ಚು,
ಕೆರಳಿದ ಕೋಮಲೆ ಕಾಡ್ಗಿಚ್ಚು,
ಇರುಳನು ನಂದಿಸೋ ಕಿಚ್ಚು,
ನೀನಲ್ಲವೇ ನನಗೆ ಗೆಳತಿ?

ಹಸಿರು ತೊಟ್ಟ ಅಂದದ ಧರಣಿ,
ಜೀವ ಜಲ ತಂಗಾಳಿ ವರಿಸಿದ ಅವನಿ,
ಕೆಸರ ಹಸಿರಾಗಿಸೋ ಕರುಣಿ,
ನೀನಲ್ಲವೇ ನನಗೆ ಗೆಳತಿ?

Sunday, April 5, 2009

ದೀನ ನಾನಾದೆ!!!!

ದಿನಕರನ ದಯೆಕಾಣದೆ,
ದಿಗಂತದಲಿ ದಿಕ್ಕು ತೋಚದೆ,
ದಿನವೊಂದು ಯುಗವಾಗಿದೆ,
ಗೆಳತಿ!!! ನಿನ್ನೊಲುಮೆ ನನಗಿಲ್ಲದೆ.

ಚಿರ ಹರೆಯದ ಅರಿವಿಲ್ಲದೆ,
ಚಿಂತೆ ಮನೆ ಮಾಡಿದೆ,
ಚಿತೆಯ ಹಾದಿ ಹಿಡಿದಿದೆ
ಜೀವ, ಗೆಳತಿ!!! ನಿನ್ನೊಲುಮೆ ನನಗಿಲ್ಲದೆ.

ಕಡಲು ಕೆರಳಿದೆ,
ಕನಸು ಚದುರಿದೆ,
ಕವಿಗಿರುಳು ಕವಿದಿದೆ,
ಗೆಳತಿ!!! ನಿನ್ನೊಲುಮೆ ನನಗಿಲ್ಲದೆ.

ಕಣ್ಣು ಕಾದಿದೆ,
ಮನಸು ಬೇಡಿದೆ,
ಸನಿಹ ಬಯಸಿದೆ,
ನಿನ್ನ ಉಸಿರು ನನ್ನದೆ,
ನನ್ನ ಜೀವ ನಿನ್ನದೆ.

Saturday, March 28, 2009

ಯುಗಾದಿಯ ಶುಭಾಶಯಗಳು...

ನವ ವಸಂತ, ನವ ವರುಷಕೆ,
ಹೊಸತನವನು ತರಲಿ...
ಹೊಸ ಸಂವತ್ಸರ, ಹೊಸ ಚೈತ್ರದಿ,
ಹಳೆನೋವ್ಗಳ ಅಳಿಸಲಿ...
ಹೊಸ ವರುಷಕೆ,ಹೊಸ ವರುಷವು,
ಹೊಸ ಹರುಷವ ತರಲಿ...

ಬೇವು-ಬೆಲ್ಲದ, ಸಿಹಿ-ಕಹಿಯ
ಸಂಗಮವು ಸುಖವಾಗಲಿ...
ಸಂಗಮದ ಸವಿಯೊಂದಿಗೆ,
ಹೊಸ ಕನಸು ಚಿಗುರಾಗಲಿ...
ಹೊಸ ವರುಷಕೆ,ಹೊಸ ವರುಷವು,
ಹೊಸ ಹರುಷವ ತರಲಿ...

ಹೊಸ ದಿನದೆ,ಹೊಸ ನಗೆಯು,
ಕುಡಿಯೊಡೆದು ಹಸಿರಾಗಲಿ...
ಜೀವನದ, ಹೊಸ ದಾರಿಯಲಿ,
ನವ ಚೇತನ ಚಿಮ್ಮಲಿ...
ಹೊಸ ವರುಷಕೆ,ಹೊಸ ವರುಷವು,
ಹೊಸ ಹರುಷವ ತರಲಿ...