ಮಾಯವಾಗಿದೆ ಕಿರುನಗೆ ಮೊಗದ ಅಂಗಳದಿಂದ,
ಮರೆಯಾಗುತಿದೆ ಒಲುಮೆ ಮನಕೆ ಒಲಿದವರಿಂದ,
ನಲಿಯುತಿದೆ ದೂರದಲ್ಲೊಂದು ಒಂಟಿ ತಾರೆ
ನನ್ನಂತೆಯೇ ನೀನು, ಸನಿಹ ಕಾಣ್ವರು ಆಪ್ತರು
ಕೋಟಿ ಮೈಲುಗಳ ದೂರದಿಂದ,
ಕಾಲನೆ ನೀನೆಷ್ಟು ಕ್ರೂರ...???
ಉರುಳುತಿದೆ ಕಾಲ ನಾಳೆಯ ಬಳಿಗೆ,
ಹೊರಳುತಿದೆ ಮನ ಬಾಧ್ಯತೆಗಳೆಡೆಗೆ,
ಅರಳುತಿದೆ ಪ್ರೀತಿ ನವಜೀವದೆಡೆಗೆ,
ಪಾತಾಳವೇತಕೆ ಸೇರಿತು ಮೈತ್ರಿ?
ಬಯಸಿಯೋ, ಬಯಸದೆಯೋ ಬಂದ
ಬದಲಾವಣೆಗಳಿಂದ,
ಕಾಲನೆ ನೀನೆಷ್ಟು ಕ್ರೂರ...???
ನನ್ನದೆನ್ನುವ ಭಾವ ನಿನ್ನಲ್ಲಿ ನುಗ್ಗಿರಲು,
ನನ್ನ ನೋವನು ನಾನು ಯಾರಲ್ಲಿ ಬಿಚ್ಚಿಡಲಿ?
ನನ್ನ ನಲಿವನು ನಾನು ಯಾರ ಜೊತೆ ಹಂಚಲಿ?
ನನ್ನ ನಲ್ಮೆಯ ಜೀವ, ನನ್ನೊಡನೆ ನೀನಿರಲು,
ನರರಧಿಪತಿ ನಾರಾಯಣನೆ ಮುಂಬರಲು,
ನೇರ ನೋಟವ ಭಿತ್ತಿ, ಮುಳ್ಳಿನ ಹಾದಿಯಲು
ಮೆಟ್ಟಿ ನಡೆಯವೆ ನಾನು ಗರ್ವದಿಂದ...
No comments:
Post a Comment