ಜಾರಿಹೋದ ಸಮಯದಲ್ಲಿ ಹಾರಿಹೋದ ಹಕ್ಕಿಗಳು,
ಓಡಿಬರುವ ಸಮಯದಲಿ ಮೋಡಿಮಾಡೋ ಹಕ್ಕಿಗಳು,
ನೋಡಿ ನೋಡಿ ಸಾಕಾಯಿತು ಈ ಸಮಯದ ಆಟಗಳು,
ಹೋದವೆಷ್ಟೋ ಬಂದವೆಷ್ಟೋ ಲೆಕ್ಕ ಇತ್ತ ಭೂಪನಾರು?
ಎಲ್ಲವೂ ಕಣ್ಣಮುಂದೆ ಬರಿಯ ಚಲಿಸೋ ಮೋಡಗಳು... ಚಲಿಸುವಾ ಮೋಡಗಳು...||
ನೋಡೋ ನೋಟ ಬೇರೆ ಬೇರೆ, ಇರುವುದೆರಡು ಕಣ್ಣುಗಳು,
ಹಿಂದೆ ಒಂದು, ಮುಂದೆ ಒಂದು ಮಾತನಾಡೋ ಹಕ್ಕಿಗಳು,
ಬಿಟ್ಟ ಕೆಟ್ಟ, ಕೆಟ್ಟು ಬಿಟ್ಟ, ಬಿಟ್ಟು ಕೆಟ್ಟ ಅನುಭವಗಳು,
ಆದವೆಷ್ಟೋ ಹೋದವೆಷ್ಟೋ ಲೆಕ್ಕ ಇತ್ತ ಭೂಪನಾರು?
ಎಲ್ಲವೂ ಕಣ್ಣಮುಂದೆ ಬರಿಯ ಚಲಿಸೋ ಮೋಡಗಳು... ಚಲಿಸುವಾ ಮೋಡಗಳು...||
ಧುಮುಕುವಾ ಜರಿ-ತೊರೆಗಳು, ಹರಿಯುವಾಗ ನದಿಗಳು,
ಒಮ್ಮೆ ಹಾರಿ, ಒಮ್ಮೆ ತೆವಳೋ ಚಾಣಕ್ಷ ಹಕ್ಕಿಗಳು,
ಕಲಿತ ಮರೆತ, ಕಲಿತು ಮರೆತ, ಮರೆತು ಕಲಿತ ಪಾಠಗಳು,
ಕಾಲನೊಬ್ಬ ಮಾಯಗಾರ ಕಲಿಸುವುವಂತ ಪಾಠಗಳು,
ಕಲಿತದೆಷ್ಟೋ, ಮರೆತದೆಷ್ಟೋ ಲೆಕ್ಕ ಇತ್ತ ಭೂಪನಾರು?
ಎಲ್ಲವೂ ಕಣ್ಣಮುಂದೆ ಬರಿಯ ಚಲಿಸೋ ಮೋಡಗಳು... ಚಲಿಸುವಾ ಮೋಡಗಳು...||
No comments:
Post a Comment