Google Search

Custom Search

Wednesday, December 8, 2010

ಮುಗ್ದ ಮಂದಹಾಸ...


ಉದ್ದ ಮೊಗದ ಮುಗ್ದೆ ಯಾರೆ?
ಮುದ್ದು ಮಂದಹಾಸ ತೋರೆ,
ಮದ್ದು ಗುಂಡು ಬೇಡ ಬಾರೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೊಲ್ಲಲು...


ಪೆದ್ದನಾಗಿ ಬಿದ್ದೆನಲ್ಲೆ,
ಗುದ್ದಿಯಾದರೂನೂ ಕೊಲ್ಲೆ,
ಗೆದ್ದ ಮನವ ಅಳಿಸಲೊಲ್ಲೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೆಡಿಸಲು...


ಒದ್ದೆ ಮೈಗೆ ಚಳಿಯ ಹಾಳೆ,
ಎದ್ದು ಬಿದ್ದು ಬಂದೆ ಕೇಳೆ,
ಕದ್ದು ನೋಡೋ ಆಟ ನಿಲಿಸಿ
ಜಿದ್ದನೆಲ್ಲ ಮರೆಗೆ ಸರಿಸಿ,
ಮುಗ್ದ ಮಂದಹಾಸ ತೋರೆ
ಮುದ್ದು ಮನಸನುಳಿಸಲು....

Monday, November 29, 2010

ಮುದ್ದು ಮನಸು...

ಎಳೆ ಎಳೆಯಾಗಿ ಹೆಣೆದ,
ಎಳೆ ಮೊಗದ ನಿನ್ನಂದ,
ಇಳೆ ಮೇಲೆ ಕಂಡಾಗಿನಿಂದ,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

ಎಲೆ ಮೇಲಿನ ನೀರ ಬಿಂದು,
ತಿಳಿ ಮೊಗದಲಿ ಕಂಡೆ ಅಂದು,
ಹೊಳೆಯುತಲಿರುವ ನಿನ್ ಕಣ್ಣ ಕಂಡು,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

ಚಳಿ ರಾತ್ರಿಯಲಿ ಚಂದಿರನ ಕಂಡು,
ಬಿಳಿ ಹಾಲ ಹೊಳೆಯಲ್ಲಿ ಮಿಂದು,
ಬಳೆಗಳ ಸದ್ದಲಿ ಹದವಾಗಿ ಬೆಂದು,
ಬೆಳಗಾಗಲೆದ್ದು ಮೊಗವ ಮತ್ತೆ ಕಂಡು,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

Tuesday, November 23, 2010

ಚುಕ್ಕಿ...

ಕತ್ತಲೆ ರಾತ್ರಿಯಲಿ,
ಮೆತ್ತನೆ ಸುಳಿದಾಡಿದೆ ಗೆಳತಿ,
ಹೊತ್ತು ಮುಳುಗಿದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಬೆತ್ತಲೆ ಬಾನಿನಲಿ,
ಎತ್ತ ನೋಡಲೇ ಗೆಳತಿ?
ಕತ್ತು ಬಾಗದು ಕೆಳಗೆ ಹೊತ್ತು ಹತ್ತಾದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಕಿತ್ತಳೆ ತೋಟದಲಿ,
ಸುತ್ತ ಅಲೆದಾಡಿದೆ ಗೆಳತಿ,
ಚಿತ್ತಾರ ಬಿಡಿಸಿದ್ದೆ ನೀ ನನ್ನ ನೆತ್ತಿ ಮೇಲೆ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

Thursday, October 28, 2010

ಮೌನ...

ಕರೆದು ಕೆರದಾಗ್ ಹೊಡ್ದಾಂಗ್ ಕೇಳು,
ನೀನು ಕ್ರೂರ ಪ್ರಾಣಿ||
ತಲೆ ಕೆರ್ಕೊಂಡ್ ಕೂತ್ಕೊಂಡಿದ್ರೆ,
ನೀನೆ ಪರಮ ಜ್ಞಾನಿ||

ಮಾಡಿದ್ ತಪ್ಪು ಅಂತ್ಹೇಳಿದ್ರೆ,
ಬೀಳ್ತಾವ್ ಮೆಟ್ನಾಗ್ ಏಟು||
ತಪ್ಪೇನಿಲ್ಲಾಂತ ತೆಪ್ಪಗಿದ್ರೆ
ಆಹಾ!! ನೋಟೆ ಇಲ್ದೇ ವೋಟು||

ಮಾತು ಮನೆ ಕೆಡ್ಸುತ್ತಾಂತ
ಗೊತ್ತಿದ್ರೂನೂ, ಬೇಕೋ ನಿಂಗೆ ಮಾತು??
ಏನು ನಿಂಗೆ ಗೊತ್ತಿಲ್ಲಾಂತ, ನಿನ್ನ ಬಾಯ್ನ
ಮುಚ್ಕೊಂಡಿದ್ರೆ, ಮುಚ್ಕೊತಾವೆ ತೂತು.....

Friday, October 22, 2010

ಹುಸಿಯಾದೆ ನೀನು...

ನೀರಲೆಯ ನೊರೆ ಮೇಲೆ ಮೆಲ್ಲ-ಮೆಲ್ಲನೆ ನಡೆವೆ,
ನೂರಾರು ಸಾಲುಗಳ ಒಂದೇ ಮಾತಲಿ ನುಡಿವೆ,
ಇನ್ಯಾರು ಬಂದರು ನಮಗಿಲ್ಲ ಇಂದು-ನಾಳೆಯ ಗೊಡವೆ,
ಕಣ್ಣೀರು ಸುರಿಸದಿರು ಉಳಿಸು ನನ್ನ, ಓ ಒಲವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.

ಊರೆಲ್ಲ ಅಲೆದರು, ಮನದಲ್ಲಿ ನಿನ್ನ ಜಪ ಒಲವೆ,
ಕರೆಯಲ್ಲೂ ನೀನಿರುವೆ, ಕಾರಣವು ನಿನ್ನ ನಡುವೆ?
ಕೊರಳಲ್ಲೆ ಉಳಿದಿರುವೆ, ಕೋಪವಿರುವುದೆ ನಮ್ಮ ನಡುವೆ?
ಕರುಣೆಯಲೆ ಕನಿಕರಿಸೇ, ಮನದಾಳದಿಂದ ನಿನ್ನ ಕರೆವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.

Thursday, October 21, 2010

ನೀರಲೆ...

ನೀರಲೆಯ ಮೇಲೆ ನಡೆವ ಓ ನೀರೆ,
ನನ್ನೆಡೆಗೆ ನಡೆದು ನೀ ಬಾರೆ,
ಎಳೆಬಳ್ಳಿ ಕಟಿಯ ಓ ಚೆಲುವೆ,
ನಿನ್ನೆಡೆಗೆ ಸೆಳೆದೆ ನನ್ನೊಲವೆ,
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.

ಸುರನರರ ಮರೆಸುವ ಚೆಲುವೆ,
ಸುರಪಾನದಾ ಮತ್ತನೀನಳಿಸುವೆ,
ಹುಸಿಯಾಟ ಆಡದಿರು ನೀ ಒಲವೆ,
ಬಿಸಿನೋಟ ಯಾಕೆ? ಸಾಕು ನಿನ್ ನಗುವೆ
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.

Tuesday, October 19, 2010

ಅನ್ನ-ಹೊನ್ನು-ಮಣ್ಣು...

ಹುಡ್ಕೋಂಡ್ ಹೋದೆ ಚಿಲ್ಲಿ ಚಿಕನ್ನು,
ಸಿಕ್ಕಿದ್ ಮಾತ್ರ ಖಾಲಿ ಬನ್ನು,
ಹೊಟ್ಟೇನ್ ಸೇರಿತ್ತ್  ಅವನ ಬೆನ್ನು,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು,

ಉಣ್ಣೋಕೆ ಬೇಕಾ ಅಷ್ಟೊಂದ್ ಹೊನ್ನು?
ಬದ್ಕೋಕ್ ಬೇಕಾದಷ್ಟು ತಿನ್ನು,
ಸತ್ಯ ನೀನು ತಿಳ್ಕೊ ಗೆಳೆಯ,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು......