ವಸ್ತ್ರದಿಂದಲೇ ನಿನ್ನ ಸೊಬಗು ಹಿರಿದಾಗಿದೆ,
ಅಸ್ತ್ರವಾಗಿದೆ ವಸ್ತ್ರ ಈ ಜಗದೊಳಗೆ,
ವಾಸ್ತವದಲಿ ನಿರ್ವಾಣವಾದರೆ ಬರಿಯ ನಗ್ನ ಜೀವ,
ವಸ್ತ್ರವಿಲ್ಲದ ನಗ್ನತೆಯಲಿ ಎಲ್ಲರೂ ಒಂದೇ,
ಬೆತ್ತಲಾಗುತಿರುವಳು ಧರಣಿ ಕಣ್ಣಮುಂದೆ...
ನಾಡ ಕಟ್ಟುವ ನೆಪದಲಿ ಸುಟ್ಟ
ಕಾಡ ಮರಗಳೆಷ್ಟೋ ನಾಡ ಚಿಗುರುಗಳೆಷ್ಟೋ,
ಬೇಡದಿದ್ದರೂ ನೀಡಿಹಳು ಬಯಸಿದ್ದೆಲ್ಲವನು,
ಬೇಡರಂತೇಕೆ ಕಿತ್ತು ತಿನ್ನುವಿರವಳ???
ಬೆತ್ತಲಾಗುತಿರುವಳು ಧರಣಿ ಕಣ್ಣಮುಂದೆ...
ಹಚ್ಚ ಹಸುರಿನ ಗಿರಿ-ಮರಗಳ ಸೀರೆಯನುಟ್ಟು,
ಹೊಚ್ಚ ಹೊಸ ಜೀವಕೆ ಪ್ರಾಣವನಿಟ್ಟು,
ಸ್ವಚ್ಚ ಸೌಗಂಧ ಗಾಳಿಯ ನಿನಗೆ ಕೊಟ್ಟು,
ಉಚ್ಚ ಸ್ಥಾನದಲಿಟ್ಟಿಹಳು ನಿನ್ನ...
ತುಚ್ಛ ಆಸೆಗಳಿಂದ ಹರಿದಿರುವೆ ಅವಳುಡುಗೆ,
ಬೆತ್ತಲಾಗುತಿರುವಳು ಧರಣಿ ಕಣ್ಣಮುಂದೆ...
No comments:
Post a Comment