ಮತ್ತೆ ವಾಲುತಿದೆ ಮನಸು ನಿನ್ನೆಡೆಗೆ,
ಏನು ಮೋಡಿಯೋ ಆ ಜೋಡಿ ಕಂಗಳಲಿ,
ಎತ್ತ ನೋಡಬೇಕೆನಿಸಿದರು ನನಗೆ,
ಸುತ್ತಲೂ ಆ ಎರಡು ಕಣ್ಣುಗಳೇ,
ಸತ್ತು ಬದುಕುತಿದೆ ಮನಸು ಮುತ್ತನಿಡಲು
ಆ ಜೋಡಿ ಕಂಗಳಿಗೆ.....
ನಡು ದಾರಿಯಲೂ ಕಾಣದಾಗಿದೆ ದಿಕ್ಕು,
ಕಡಲಂತೆ ಕಾಣುತಿದೆ ನಡೆವ ಹಾದಿ,
ಕಿಡಿಯೊಂದು ಹೊತ್ತಿದೆ ನಿನ್ನ ಕಣ್ಣುಗಳಿಂದ,
ಸುಡುತಿದೆ ಎನ್ನೊಡಲ ನುಡಿಯಲಾದೆನು ನಾ,
ಕೊಡುವೆನೊಂದು ಸಿಹಿ ಮುತ್ತನು
ಆ ಜೋಡಿ ಕಂಗಳಿಗೆ.....
ಮೆಲ್ಲ ಮೆಲ್ಲನೆ ನಲ್ಲನ ಕೊಲ್ಲುತಿವೆ ಕಣ್ಣುಗಳು,
ಮಲ್ಲಿಗೆಯ ಪರಿಮಳವು ಮಾಯವಾಗಿದೆ,
ಎಲ್ಲಿರುವೆನೋ ನಾನು ಅರಿವಿಲ್ಲವಾಗಿದೆ,
ಅಲ್ಲಿ ನೋಡಿದ ಆ ಜೋಡಿ ಕಣ್ಣುಗಳು,
ಎಲ್ಲ ಜಗವನು ಮರೆಸಿ ತನ್ನತ್ತ ಸೆಳೆದಿವೆ,
ಒಲ್ಲೆಯೆಂದರು ಒಮ್ಮೆ ಮುತ್ತನಿಡುವೆ
ಆ ಜೋಡಿ ಕಂಗಳಿಗೆ....
No comments:
Post a Comment