Google Search

Custom Search
Showing posts with label ಮೋಸ. Show all posts
Showing posts with label ಮೋಸ. Show all posts

Tuesday, July 9, 2013

ಚರಣದಾಸಿ...

ಮಾಸಿದವು ಆಸೆಗಳು ಮೋಸದಾಟದಲಿ,
ಮಸಿಯ ಬಳಿದಿರಿ ನೀವ್ ಮುಗ್ದ ಹೃದಯಕೆ||

ಹಸಿಯ ಜೀವಕೆ ಏಕೆ ಹುಸಿಯ ಉಣ ಬಡಿಸಿದಿರಿ?
ಹಸುವಿನಂತೆಯೇ ಇದ್ದು, ಕಸಿಯ ಮಡಿಲೊಳಗಿಟ್ಟು,
ಕಸಿದುಕೊಂಡಿರವಳ ನಗೆ ಉಸಿರು ನಿಲ್ಲುವವರೆಗೆ||

ಘಾಸಿಯರಿವಿಲ್ಲ ಹುಸಿ ಸಿರಿಯ ಮೋಸದರಸರಿಗೆ,
ನುಸಿಯ ಕೀಟಗಳಂತಾಕ್ರಮಿಸಿ,
ಗಸಿಯ ಮಾಡಿದಿರವಳ ಹೊಂಬಾಳ ಕಣವೆಲ್ಲವನ್ನು||

ಹೊಸಿಲ ದಾಟಿಸಿ ನೀವ್ ಬಸಿರ ಬಗೆವುದು ಸರಿಯೇ?
ದಾಸಿಯಂತೆಣಿಸಿದಿರಿ ಬಾಳ ಹಾದಿಯಲಿ,
ಮಸೆದಿರವಳಾಸೆಗಳ ಅಣು ಅಣುಗಳಾಗಿ||

ಹಸಿಮನದ ಹುಸಿಯರಿಯದ ಮಾನಸಿ,
ಕುಸಿದು ಇಳೆಗಿಳಿದಳು ಆ ಸೌಂದರ್ಯ ರಾಸಿ,
ನಿಸಿಯಲ್ಲೇ ಹುಸಿಯಾದಳು ಆಕೆ, ಚರಣದಾಸಿ...