Google Search

Custom Search

Monday, May 30, 2011

ಉಸಿರು...


ಬೆಳದಿಂಗಳಿರುಳಲ್ಲಿ, ಬೆಳ್ಳಿ ಮೋಡದ ಅಂಚಿನಲ್ಲಿ|
ತೆಳುಗಾಳಿ ಸುಳಿದಿರಲು ಹಿತವಾದ ಧರಣಿಯಲಿ||
ತಿಳಿ ಹಾಲ ಸಾಗರದಿ ಏರಿಳಿವ ಅಲೆ ಅಲೆಯಲಿ|
ನಿನ್ನೊಲುಮೆಯ ಸವಿಯ ಸವಿದೆ ಗೆಳತಿ..||

ಹುಚ್ಚು ಹಿಡಿಸುವ ಆ ನಿನ್ನ ಕಣ್ಣುಗಳು|
ಕಿಚ್ಚು ಹೊತ್ತಿಸಿದೆ ಮನದ ಮನೆಯೊಳಗೆ||
ಕೊಚ್ಚಿ ಹಾಕಿದೆ ಇನ್ನೋರ್ವ ಬಾಲೆಯ ಬಯಕೆ,
ಹಚ್ಚ ಹಸಿರನೆ ತೊಟ್ಟ ಬೆಡಗಿ|
ನಿನ್ನೊಲುಮೆಯ ಬಯಸಿ ಕಾದಿರುವೆ ಬಾರೆ ಗೆಳತಿ..||

ಮನದಾಳಾದೊಳಗೆ, ಅಡಿಯಿಂದ ಮುಡಿವರೆಗೆ|
ಕಣ್ಣೀರ ತೆರೆಯೊಳಗೆ, ಎದೆ ಬಡಿವವರೆಗೆ||
ನುಡಿಮುತ್ತಿನೊಳಗೆ, ಉಸಿರಿರುವವರೆಗೆ|
ನಿನ್ ಹೆಸರ ಬಿಗಿದಿಡುವೆ ಓ ಪ್ರೀತಿ!! ನೀ ನನ್ನ ಒಡತಿ...||

Thursday, January 20, 2011

ನಲ್ಲೆ...


ಇಲ್ಲೆ ಎಲ್ಲೊ ಇರುವೆ ನೀನು,
ಒಲ್ಲೆ ಎಂದ ಬಡವ ನಾನು,
ಎಲ್ಲೆ ಇರದ ಪ್ರೀತಿಯನ್ನು
ನಲ್ಲೆಯಾಗಿ ತಂದೆ ನೀನು,
ಒಮ್ಮೆಯಾದರೂನೂ ಮತ್ತೆ ನೀನು ಎದುರು ಬಾರೆಲೆ....

ಬೆಲ್ಲದಂತ ನಿನ್ನ ಮನದೆ,
ಬಳ್ಳಿಯಂತ ಪ್ರೀತಿ ಬರೆದೆ,
ಕಲ್ಲಿನಂತೆ ಕಠಿಣನಾದೆ,
ಎಲ್ಲಿ ಹೋದೆ ಗೆಳತಿ ನೀನು ನನಗೆ ಹೇಳದೆ,
ಒಮ್ಮೆಯಾದರೂನೂ ಮತ್ತೆ ನೀನು ಎದುರು ಬಾರೆಲೆ....

ಅಲ್ಲಿ ಇಲ್ಲಿ ಅಲೆವ ಮನವ,
ಇಲ್ಲೇ ತಡೆದು ಹಿಡಿದೆ ನಾನು,
ಕಳ್ಳನಾಗಿ ನಿಲ್ಲಲಾರೆ
ಮಳ್ಳ ಮನವ ಉಳಿಸಲಾರೆ
ಚೆಲ್ಲಿ ನಿನ್ನ ಮುಗ್ದ ನಗುವ,
ಒಮ್ಮೆಯಾದರೂನೂ ಮತ್ತೆ ನೀನು ಎದುರು ಬಾರೆಲೆ....

Wednesday, January 5, 2011

ನೀನೆ...

ನಿರಾಭರಣ ಸುಂದರಿಯೆ,
ನಿರ್ವಸ್ತ್ರ ಧಾರಿಣಿಯೆ,
ನಿರುಪಮ ಚೆಲುವೆಯೆ,
ನಿರ್ಜೀವವಾಗುತಿಹೆ ಜೀವ ಉಳಿಸೆ...

ಅಸಮಾನ ಸುಮತಿಯೆ,
ಅನುಪಮ ವಾಚಾಳಿಯೆ,
ಅನಿಯತ ಕೌಮಾರಿಯೆ,
ಅನವರತ ನೆನೆಯುತಿಹೆ ನನ್ನ ಉಳಿಸೆ...

ಸುರಲೋಕ ಬಾಲಿಕೆಯೆ,
ಸರ್ವಗುಣ ಸಂಪನ್ನೆ,
ಸುಪ್ತಮತಿ ಶ್ರೀಮತಿಯೆ,
ಸರ್ವಸ್ವ ನೀನಾಗಿರುವೆ ಬಂದು ಉಳಿಸೆ...

Thursday, December 16, 2010

ಮಿತಿ...

ಮತಿ ಹೀನ ನಾನಾದೆ ಒಲವೆ,
ನಿನ್ನ ಒಲವಿನ ಮಿತಿಯ ಮರೆತು,
ಇನ್ಯಾರೆ ಗತಿ ನನಗೆ ಒಲವೆ,
ನೀನಿರದ ಈ ಕ್ಷಿತಿಯ ಮಿತಿಯ ಒಳಗೆ...

ಬಿರುಗಾಳಿ ಬೀಸುತಿದೆ ಮನದೊಳಗೆ,
ತನ್ನ ತಾಳ್ಮೆಯ ಗತಿಯ ಮೀರಿ,
ತಂಗಾಳಿಯಾಗಿ ನೀನೆಂದು ಬರುವೆ
ಎನ್ನ ಒಲುಮೆಯನು ಬಯಸಿ,
ನಿನಗಾಗಿ ಕಾದಿರುವೆ ಈ ಕ್ಷಿತಿಯ ಮಿತಿಯ ಒಳಗೆ...

ಸುಡುತಿರುವ ಬೆಂಕಿಯನು ಸಹಿಸಲಾರೆನು ಒಲವೆ,
ಚ್ಯುತಿಗೊಳಿಸೆ ಬೆಂಕಿಯ ಸ್ಥಿತಿ
ಸ್ವಾತಿ ಮಳೆಯನು ಸುರಿಸಿ,
ಮತಿಯ ಗತಿ ಬದಲಿಸುವ ವಿಸ್ಮಯ ಶಕ್ತಿ,
ಸ್ತುತಿ ಮಾಡಿ ಕಾದಿರುವೆ ಈ ಕ್ಷಿತಿಯ ಮಿತಿಯ ಒಳಗೆ...

Wednesday, December 8, 2010

ಮುಗ್ದ ಮಂದಹಾಸ...


ಉದ್ದ ಮೊಗದ ಮುಗ್ದೆ ಯಾರೆ?
ಮುದ್ದು ಮಂದಹಾಸ ತೋರೆ,
ಮದ್ದು ಗುಂಡು ಬೇಡ ಬಾರೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೊಲ್ಲಲು...


ಪೆದ್ದನಾಗಿ ಬಿದ್ದೆನಲ್ಲೆ,
ಗುದ್ದಿಯಾದರೂನೂ ಕೊಲ್ಲೆ,
ಗೆದ್ದ ಮನವ ಅಳಿಸಲೊಲ್ಲೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೆಡಿಸಲು...


ಒದ್ದೆ ಮೈಗೆ ಚಳಿಯ ಹಾಳೆ,
ಎದ್ದು ಬಿದ್ದು ಬಂದೆ ಕೇಳೆ,
ಕದ್ದು ನೋಡೋ ಆಟ ನಿಲಿಸಿ
ಜಿದ್ದನೆಲ್ಲ ಮರೆಗೆ ಸರಿಸಿ,
ಮುಗ್ದ ಮಂದಹಾಸ ತೋರೆ
ಮುದ್ದು ಮನಸನುಳಿಸಲು....

Monday, November 29, 2010

ಮುದ್ದು ಮನಸು...

ಎಳೆ ಎಳೆಯಾಗಿ ಹೆಣೆದ,
ಎಳೆ ಮೊಗದ ನಿನ್ನಂದ,
ಇಳೆ ಮೇಲೆ ಕಂಡಾಗಿನಿಂದ,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

ಎಲೆ ಮೇಲಿನ ನೀರ ಬಿಂದು,
ತಿಳಿ ಮೊಗದಲಿ ಕಂಡೆ ಅಂದು,
ಹೊಳೆಯುತಲಿರುವ ನಿನ್ ಕಣ್ಣ ಕಂಡು,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

ಚಳಿ ರಾತ್ರಿಯಲಿ ಚಂದಿರನ ಕಂಡು,
ಬಿಳಿ ಹಾಲ ಹೊಳೆಯಲ್ಲಿ ಮಿಂದು,
ಬಳೆಗಳ ಸದ್ದಲಿ ಹದವಾಗಿ ಬೆಂದು,
ಬೆಳಗಾಗಲೆದ್ದು ಮೊಗವ ಮತ್ತೆ ಕಂಡು,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

Tuesday, November 23, 2010

ಚುಕ್ಕಿ...

ಕತ್ತಲೆ ರಾತ್ರಿಯಲಿ,
ಮೆತ್ತನೆ ಸುಳಿದಾಡಿದೆ ಗೆಳತಿ,
ಹೊತ್ತು ಮುಳುಗಿದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಬೆತ್ತಲೆ ಬಾನಿನಲಿ,
ಎತ್ತ ನೋಡಲೇ ಗೆಳತಿ?
ಕತ್ತು ಬಾಗದು ಕೆಳಗೆ ಹೊತ್ತು ಹತ್ತಾದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಕಿತ್ತಳೆ ತೋಟದಲಿ,
ಸುತ್ತ ಅಲೆದಾಡಿದೆ ಗೆಳತಿ,
ಚಿತ್ತಾರ ಬಿಡಿಸಿದ್ದೆ ನೀ ನನ್ನ ನೆತ್ತಿ ಮೇಲೆ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...