Google Search

Custom Search
Showing posts with label ನಲ್ಲೆ. Show all posts
Showing posts with label ನಲ್ಲೆ. Show all posts

Thursday, May 9, 2013

ತುಂಟ ಬೆರಳು...


ತೆವಳುತಿದೆ ತೋರ್ಬೆರಳ ತುದಿ
ಅಂಗನೆಯ ಮುಂಗುರುಳ ಬಳಿಗೆ,
ಸುರುಳಿಯಾಗಿಸಿಯದನು ಇಳಿಯುತಿದೆ
ಹೊಳೆವ ಕಣ್ಣುಗಳ ಕಡೆಗೆ...

ಮೀನಾಕ್ಷಿಯವಳ ಕಣ್ಣುಗಳ ಚುಂಬಿಸಲು
ಸದ್ದಿಲ್ಲದೆ ಸಾಗಿದೆ ಅಧರದೆಡೆಗೆ,
ತೊಂಡೆ ತುಟಿಗಳನೊಮ್ಮೆ ಚಿವುಟಿರಲು ಆ ಬೆರಳು,
ಮೇಲೇರಿತು ಅವಳ ಹುಬ್ಬು,
ತುಟಿಗೆ ತುಟಿಯೊತ್ತಿ ಮುತ್ತಿಡಲು ಬರಿಯ ಮೌನ...

ಕೊರಳಿಂದ ಕೆಳಗಿಳಿಯೆ ಬೆರಳು, ಕೇಳಿತು...
ನನ್ನೇಕೆ ಮರೆತೆ ಇನಿಯನೆ? ನಾಗೈದ ಅಪರಾಧವೇನು???
ಹೇಗೆ ಮರೆಯಲೆ ನಿನ್ನ??? ಇದೋ ನಿನಗಾಗಿ
ಮುತ್ತುಗಳ ಹಾರ, ಮತ್ತದೇ ಸ್ನಿಗ್ಧ ಮೌನ...

ಎದೆಗೂಡ ನಡುವೆ ನುಸುಳಿ ನುಗ್ಗಿ
ನಡುವ ತಲುಪಿದೆ ಬೆರಳು,
ಒಂದರಿಂದಾಗದು ಎಂದು ಎರಡು ಕೈಯಲಿ
ನಡುವ ನವಿರಾಗಿ ಹಿಡಿದಿರಲು,
ಮತ್ತದೇ ಮೌನ ಅವಳ ಮೊಗದಲ್ಲಿ...
ಹಿಡಿತ ಬಿಗಿಯಾಗಿಸಿ, ನಾಭಿಗೆ ಬಿಸಿಯುಸಿರ ಸೋಕಿಸಿ,
ನಡುವ ಮಧ್ಯದಲಿ ಮುತ್ತೊಂದ ಮೆತ್ತಗೆ ಕೊಡಲು,
ನಾಚಿ ನುಡಿದಳು ನನ್ನಾಕೆ,
ನಿಲ್ಲಿಸೆಯಾ ಇನಿಯ ತುಂಟ ಬೆರಳಿನಾಟವನಿಂದು???

Sunday, October 28, 2012

ಮತ್ತೆ ವಾಲುತಿದೆ ಮನಸು...


ಮತ್ತೆ ವಾಲುತಿದೆ ಮನಸು ನಿನ್ನೆಡೆಗೆ,
ಏನು ಮೋಡಿಯೋ ಆ ಜೋಡಿ ಕಂಗಳಲಿ,
ಎತ್ತ ನೋಡಬೇಕೆನಿಸಿದರು ನನಗೆ,
ಸುತ್ತಲೂ ಆ ಎರಡು ಕಣ್ಣುಗಳೇ,
ಸತ್ತು ಬದುಕುತಿದೆ ಮನಸು ಮುತ್ತನಿಡಲು
ಆ ಜೋಡಿ ಕಂಗಳಿಗೆ.....

ನಡು ದಾರಿಯಲೂ ಕಾಣದಾಗಿದೆ ದಿಕ್ಕು,
ಕಡಲಂತೆ ಕಾಣುತಿದೆ ನಡೆವ ಹಾದಿ,
ಕಿಡಿಯೊಂದು ಹೊತ್ತಿದೆ ನಿನ್ನ ಕಣ್ಣುಗಳಿಂದ,
ಸುಡುತಿದೆ ಎನ್ನೊಡಲ ನುಡಿಯಲಾದೆನು ನಾ,
ಕೊಡುವೆನೊಂದು ಸಿಹಿ ಮುತ್ತನು
ಆ ಜೋಡಿ ಕಂಗಳಿಗೆ.....

ಮೆಲ್ಲ ಮೆಲ್ಲನೆ ನಲ್ಲನ ಕೊಲ್ಲುತಿವೆ ಕಣ್ಣುಗಳು,
ಮಲ್ಲಿಗೆಯ ಪರಿಮಳವು ಮಾಯವಾಗಿದೆ,
ಎಲ್ಲಿರುವೆನೋ ನಾನು ಅರಿವಿಲ್ಲವಾಗಿದೆ,
ಅಲ್ಲಿ ನೋಡಿದ ಆ ಜೋಡಿ ಕಣ್ಣುಗಳು,
ಎಲ್ಲ ಜಗವನು ಮರೆಸಿ ತನ್ನತ್ತ ಸೆಳೆದಿವೆ,
ಒಲ್ಲೆಯೆಂದರು ಒಮ್ಮೆ ಮುತ್ತನಿಡುವೆ
ಆ ಜೋಡಿ ಕಂಗಳಿಗೆ....

Sunday, June 24, 2012

ಕಳೆದೆ ಕಳೆದಿರುಳ...


ಕಳೆದೆ ಕಳೆದಿರುಳ
ಕನಸಲಿ ಕಂಡ
ಕಮಲನಯನೆಯ
ಕರಕಮಲಗಳಲ್ಲಿ....

ಕಳೆದ ಕ್ಷಣವನೆ ಕನವರಿಸಿ
ಕಾಲಾಂತರಾಳದಲಿ
ಕರಗಿ ಕಾದಿರುವೆ ನಾ...
ಕೊರಳಂಚಿನವರೆಗು
ಕೋಪವನು ಕೆರಳಿಸದೆ
ಕಷ್ಟವಾದರೂ ಸರಿಯೇ
ಕಣ್ಣೆದುರು ನಿಲ್ಲೆ ಗೆಳತಿ...

ಕಹಿಯ ಕಲ್ಪನೆಗಳೆಲ್ಲ
ಕೊಸರಲ್ಲು ಇರದಿರಲಿ
ಕಣ್ಣ ನೇರದ ನೋಟ
ಕಳಶದ ಕಡೆಯಿರಲಿ,
ಕನಸ ಕನ್ನಿಕೆಯೆಂದು
ಕಣ್ಣೆದುರು ನಿಲ್ಲುವಳೆಂದು
ಕಾತರದಿ ಕಾದಿವುವೆ,
ಕೇಳೆ ಗೆಳತಿ ನಾ ಕಲ್ಪನಾವಿಹಾರಿ.... :)

Thursday, January 20, 2011

ನಲ್ಲೆ...


ಇಲ್ಲೆ ಎಲ್ಲೊ ಇರುವೆ ನೀನು,
ಒಲ್ಲೆ ಎಂದ ಬಡವ ನಾನು,
ಎಲ್ಲೆ ಇರದ ಪ್ರೀತಿಯನ್ನು
ನಲ್ಲೆಯಾಗಿ ತಂದೆ ನೀನು,
ಒಮ್ಮೆಯಾದರೂನೂ ಮತ್ತೆ ನೀನು ಎದುರು ಬಾರೆಲೆ....

ಬೆಲ್ಲದಂತ ನಿನ್ನ ಮನದೆ,
ಬಳ್ಳಿಯಂತ ಪ್ರೀತಿ ಬರೆದೆ,
ಕಲ್ಲಿನಂತೆ ಕಠಿಣನಾದೆ,
ಎಲ್ಲಿ ಹೋದೆ ಗೆಳತಿ ನೀನು ನನಗೆ ಹೇಳದೆ,
ಒಮ್ಮೆಯಾದರೂನೂ ಮತ್ತೆ ನೀನು ಎದುರು ಬಾರೆಲೆ....

ಅಲ್ಲಿ ಇಲ್ಲಿ ಅಲೆವ ಮನವ,
ಇಲ್ಲೇ ತಡೆದು ಹಿಡಿದೆ ನಾನು,
ಕಳ್ಳನಾಗಿ ನಿಲ್ಲಲಾರೆ
ಮಳ್ಳ ಮನವ ಉಳಿಸಲಾರೆ
ಚೆಲ್ಲಿ ನಿನ್ನ ಮುಗ್ದ ನಗುವ,
ಒಮ್ಮೆಯಾದರೂನೂ ಮತ್ತೆ ನೀನು ಎದುರು ಬಾರೆಲೆ....