Google Search

Custom Search

Saturday, July 28, 2012

ಗರ್ವ....


ಮಾಯವಾಗಿದೆ ಕಿರುನಗೆ ಮೊಗದ ಅಂಗಳದಿಂದ,
ಮರೆಯಾಗುತಿದೆ ಒಲುಮೆ ಮನಕೆ ಒಲಿದವರಿಂದ,
ನಲಿಯುತಿದೆ ದೂರದಲ್ಲೊಂದು ಒಂಟಿ ತಾರೆ
ನನ್ನಂತೆಯೇ ನೀನು, ಸನಿಹ ಕಾಣ್ವರು ಆಪ್ತರು
ಕೋಟಿ ಮೈಲುಗಳ ದೂರದಿಂದ,
ಕಾಲನೆ ನೀನೆಷ್ಟು ಕ್ರೂರ...???

ಉರುಳುತಿದೆ ಕಾಲ ನಾಳೆಯ ಬಳಿಗೆ,
ಹೊರಳುತಿದೆ ಮನ ಬಾಧ್ಯತೆಗಳೆಡೆಗೆ,
ಅರಳುತಿದೆ ಪ್ರೀತಿ ನವಜೀವದೆಡೆಗೆ,
ಪಾತಾಳವೇತಕೆ ಸೇರಿತು ಮೈತ್ರಿ?
ಬಯಸಿಯೋ, ಬಯಸದೆಯೋ ಬಂದ
ಬದಲಾವಣೆಗಳಿಂದ,
ಕಾಲನೆ ನೀನೆಷ್ಟು ಕ್ರೂರ...???

ನನ್ನದೆನ್ನುವ ಭಾವ ನಿನ್ನಲ್ಲಿ ನುಗ್ಗಿರಲು,
ನನ್ನ ನೋವನು ನಾನು ಯಾರಲ್ಲಿ ಬಿಚ್ಚಿಡಲಿ?
ನನ್ನ ನಲಿವನು ನಾನು ಯಾರ ಜೊತೆ ಹಂಚಲಿ?
ನನ್ನ ನಲ್ಮೆಯ ಜೀವ, ನನ್ನೊಡನೆ ನೀನಿರಲು,
ನರರಧಿಪತಿ ನಾರಾಯಣನೆ ಮುಂಬರಲು,
ನೇರ ನೋಟವ ಭಿತ್ತಿ, ಮುಳ್ಳಿನ ಹಾದಿಯಲು
ಮೆಟ್ಟಿ ನಡೆಯವೆ ನಾನು ಗರ್ವದಿಂದ...

Thursday, July 26, 2012

ಮಿಲನ...


ಅನವರತ ಅನುಸರಿಸಿ,
ಉಸಿರೆಲ್ಲ ಉಣಬಡಿಸಿ,
ಕನಸಲ್ಲೇ ಕನವರಿಸಿ,
ಮುದುಡಿದ್ದ ಮನತಣಿಸಿ,
ನಿನ್ನ ಹಿಂದೆ ಬಂದೆ ಗೆಳತಿ.....

ನೆನಪುಗಳು ನಳನಳಿಸಿ,
ನೆನಪಲ್ಲೇ ನನ್ನಳಿಸಿ,
ನೆನಪಾಗಿ ನಿನ್ನುಳಿಸಿ,
ಮರುಗಿದ್ದ ಮನಸವೆಸಿ,
ನಿನಗಾಗಿ ಕಾದೆ ಗೆಳತಿ.....

ನಿನ್ನಾಸೆ ನಿಗ್ರಹಿಸಿ,
ಒಲವನ್ನು ಒಳಗಿಳಿಸಿ,
ಹೃದಯದಲಿ ಹನಿಸುರಿಸಿ,
ತಂಗಾಳಿ ತಂಪುಣಿಸಿ,
ತಡೆಹಿಡಿದ ಆಸೆಗಳ ಚೆಲುವಿಂದ ಚಿಮ್ಮಿಸುತ,
ನನ್ನ ಹೃದಯ ಸೇರೆ ಗೆಳತಿ...

Tuesday, July 3, 2012

ಆಷಾಡ...


ಆಷಾಡದ ತಂಗಾಳಿ ಆಸೆಗಳ ಚಿಮ್ಮಿಸಲು,
ನವಜೋಡಿಯು ಅನುರಾಗದ
ಅಲೆಗಳನು ಅವಿತಿಟ್ಟು,
ವಿರಹದ ಬೇಗೆಯಲಿ ಪರಿಪರಿಯಲಿ ಬೆಂದು
ಶ್ರಾವಣದ ಆಗಮಕೆ ಕಾದಿರುವ
ಬಗೆಯನೇನೆಂದು ಹೇಳಲೇ ಒಲವ ಗೆಳತಿ... :)

ಆಷಾಡವಾಗಲಿ ವೈಶಾಖವಾಗಲಿ,
ಚೈತ್ರ ಶ್ರಾವಣಗಳೇ ಆಗಲಿ,
ಹುಣ್ಣಿಮೆಯು ಬರದೆಹೋಗುವುದೇನೆ?
ಸಾಗರವು ಉಕ್ಕದಿರುವುದೇನೆ?
ಪ್ರಕೃತಿಯ ಚಕ್ರದಲಿ ಅವಕಿಲ್ಲದ ಅಂತರ,
ಬೇಕೇ ನಮ್ಮಿಬ್ಬರ ನಡುವೆ? ಹೇಳೆಲೇ ಒಲವ ಗೆಳತಿ...

ಅವರಿವರ ಮಾತಿಗೆ ಕಿವಿಗೊಡದೆ,
ಹಿರಿಯರ ಸಲಹೆಯ ಸ್ವೀಕರಿಸಿ,
ಅರಿತ ಜೀವದ ಜೊತೆಗೆ,
ಬೆರೆಸಿ ಒಲವಿನ ಸವಿಯ,
ಬಡಿಸಿದ ಭೋಜನವ ಮಿತವಾಗಿ ಭುಜಿಸಿ,
ಹಿತವಾದ ಅನುರಾಗ ಅನುಭವಿಸಿ
ಪ್ರಕೃತಿಯಲೊಂದಾದರೆ ಸಾಲದೇ? ಹೇಳೆಲೇ ಒಲವ ಗೆಳತಿ...