Google Search

Custom Search

Monday, August 24, 2009

ಮೊದಲ ನೋಟ ...

ಮನದ ಕದವ ತಟ್ಟಿದಳೊಮ್ಮೆ ಕಮಲ ನಯನೆ,
ಕಿರಿದು ಕದವದು ಹೊಂದೋಲ್ಲ ನಿನಗೆ, ಹೋಗೆ ಸುಮ್ಮನೆ!!
ಎರಡು ಸಾಲದೆ ನಾಲ್ಕಾಗಿದೆ ಕಂಗಳು, ನೋಡಲು ನಿನ್ನನೆ!!
ಇದನರಿತು ದೂರ ಸರಿಯೇ ಓ ಧವಳೇ ಮೆಲ್ಲನೆ, ತುಸು ಮೆಲ್ಲನೆ.

ದೂರದಿಂದಲೇ ಕಂಡೆನದೇ ದಿನ ನಿನ್ ಕಣ್ಣನೆ,
ಕಣ್ಣಲ್ಲೇ ಕೊಂದೆಯಾ ಕೋಪವ?? ಬಾಲೆ ತಣ್ಣನೆ,
ಬೆಪ್ಪಾದೆನಾಕ್ಷಣ, ಬಿದ್ದೆನಲ್ಲೇ ಕೆಳಗೆ ದೊಪ್ಪನೆ,
ಇಷ್ಟಾದರೂ ನಮ್ಮಿಬ್ಬರ ಜೋಡಿಯಾಶಿವನೊಪ್ಪನೆ?? ಅವನೊಪ್ಪನೆ??

ಮಾಗಿಸಿದೆ ಮರಗಟ್ಟಿದ್ದ ಮನಸಿನ ಹುಣ್ಣನೆ,
ಸದಾ ನೀನೆ ನನ್ನೀ ಜೀವದೊಡತಿ ಕಾಣೆ,
ಇದನೊಪ್ಪದಿರೆ ನೀ, ನಾ ಮಾಡುವೆ ಮುಕ್ಕೋಟಿ ದೇವರಾಣೆ,
ನೀನೆ-ನೀನೆ ನನ್ ಮನದನ್ನೆ, ಮನಸಿನ ಬೆಣ್ಣೆ, ಓ ನನ್ ಚೆನ್ನೆ... :) ;) :)

Tuesday, July 7, 2009

ಮಿಡಿದ ಹೃದಯ...

ನಿನ ಓರೆ ನೋಟ 
ಕಾದಿರುವ ದೇಹ, ನಂದೆ ತಾನೇ?
ನಿನ ಕಣ್ಣ ಮಾಟ
ಬಯಸಿರುವ ಆಟ, ನಂದೆ ತಾನೇ?

ನಿನ ಕೆನ್ನೆ ಕೆಂಪು
ಹೇಳುತಿಹ ಮಾತು, ನಂಗೆ ತಾನೇ?
ನಿನ ಕೆನ್ನೆ ಗುಳಿಯು
ಕಾಣುತಿಹ ಕನಸು, ನಂದೆ ತಾನೇ?

ನಿನ ತುಟಿಯ ಮಿಡಿತ
ಮಿಡಿಸಿರುವ ಹೃದಯ, ನಂದೆ ತಾನೇ?
ನಿನ ತುಟಿಯ ಸವಿಯ
ಸವಿಯೋ ಸಿಹಿ ಸಮಯ, ನಂದೆ ತಾನೇ?

ನಿನ ಜೀವ ಬೆಂದು
ಬೇಡಿರುವ ಜೀವ, ನಂದೆ ತಾನೇ?
ನಿನ ಮನಸು ನೊಂದು
ಅರಸಿರುವ ಉಸಿರು, ನಂದೆ ತಾನೇ?

Saturday, June 27, 2009

ಜಗತ್ಸುಂದರಿ....

ಕೆಂಡ ಸಂಪಿಗೆ ಮುಂದೆ ಭಂಡ ಧೈರ್ಯವೇ ಮನವೇ?
ಸಡಿಲಾಗಿಸೆ ಗೆಳತಿ ಒಡಲ, ಒಳಗೆ ಬರುವೆ.

ಸಂಜೆ ಕೆಂಪಿನ ರೌದ್ರಕೆ ಅಂಜಿಲ್ಲವೇ ಮನವೇ?
ಬಾಂದಳದ ಭಾರಿ ಅಂಗಳಕೆ ತೇರ ತರುವೆ. 

ಮಂದಗಾಮಿನಿ ಮೊಗದೆ ಬೆಂದ ಛಾಯೆಯೇ ಮನವೇ?
ಚಂದದೂರಿಗೆ ಅರಸಿ ತಾಳು ಒಂದೇ ಕ್ಷಣವೆ.

ಅರಳಿದಾನನಕೆ ಕೆರಳಿದಾ ಲೇಪ ಮನವೇ,
ಸರ್ವ ಜಗ ಸುಂದರಿಗೆ ಗರ್ವ ಬರವೇ?

ಭಿತ್ತಿ ಭಿತ್ತಿಯಲಿ ಚಿತ್ತದ ಚಿತ್ರ ಮನವೇ, 
ಸಾಟಿಯಾರಿಹರೆ ಘಾಟಿ, ನೀನೆ ವಿಶ್ವ ಚೆಲುವೆ.

Friday, June 12, 2009

ಮೊದಲ ಮಿಲನ...

ಒಮ್ಮೆ ನಾಟಿತು ನಿನ್ನಲಿ ದೃಷ್ಟಿ ,
ಮುಷ್ಟಿ ಮನದಲಿ ಪ್ರೇಮ ಸೃಷ್ಟಿ,
ನಿನ್ ನಗೆಯಲಿ ಹರಿಯಿತು ಪ್ರೇಮ ವೃಷ್ಟಿ,
ನಂದಿದ ದೀಪದಲಿ ಒಂದಾದೆ ಗೆಳತಿ...

ಕೆನ್ನೆ ಕೆಂಪೇರಿತು ಮೊದಲ ಸಂಜೆ,
ಮೊನ್ನೆ ಜಿಂಕೆ ಕಣ್ಣಲಿ ಸನ್ನೆ,
ನೆನ್ನೆ ನೀನಾದೆ ಮನದನ್ನೆ ,
ನಂದಿದ ದೀಪದಲಿ ಒಂದಾದೆ ಗೆಳತಿ...

ಜೇನ್ತುಟಿ ನಡುಗಿತು ಅಂದು,
ಜೋಡಿಜೀವ ಅರಳಿತು ಬೆಂದು ,
ಮುದ್ದು-ಮನಕೆ ಮರೆಯಾದೆ ಯಾಕಿಂದು?
ನಂದಿದ ದೀಪದಲಿ ಒಂದಾದೆ ಗೆಳತಿ...

Tuesday, June 2, 2009

ಒಲವು....

ಕಡಲ ಅಲೆಗಳ ಏರಿಳಿತ,
ಏನೀ ಸಲಿಗೆಯ ಸೆಳೆತ,
ಮಿಡಿವ ಮನಸಿನ ಭಾವ ಮಿಡಿತ,
ನನ್ನ ಒಲವಿನ ಸ್ನೇಹಿತ.

ನನ್ನೀ ಹೆಸರಿಗೆ ನೀನೆ ಅಂಕಿತ,
ಸತತ ಸಹಿಸಿದೆ ನಿನ್ನ ಕೊರೆತ,
ನನ್ನ ಎದೆಯಲಿ ಸದಾ ಶಾಶ್ವತ,
ನನ್ನ ಒಲವಿನ ಸ್ನೇಹಿತ.

ನನ್ನ ಎದುರಿಗೆ ಒಮ್ಮೆ ಸೋತ,
ಮೆಲ್ಲ ಬಂದು ಒಳಗೆ ಕೂತ,
ಉಸಿರಲಿ-ಉಸಿರಾಗಿ ಬೆರೆತ,
ನನ್ನ ಒಲವಿನ ಸ್ನೇಹಿತ.


ಇದು ನನ್ನ ಆತ್ಮೀಯ/ಪ್ರೀತಿಯ ಗೆಳೆಯ/ಗೆಳತಿಯರಿಗೆ ಅರ್ಪಿತ...;) ;) ;) ☺ ☺ ☺ ...

Saturday, May 30, 2009

ಕಾದಿರುವೆ....

ಮನಸಲಿ ಮೂಡಿದೆ,
ಕನಸಲಿ ಕಾಡಿದೆ,
ನೆನಪಲೆ ನೊಂದೆ,
ಹಗಲಲಿ ಕಾಣದೆ
ಮರೆಯಾದೆ, ಕಾದಿರುವೆ ಗೆಳತಿ....

ದೂರದ ತೀರದಿ,
ತೀರದ ಬಯಕೆಯ,
ಆರದ ಆಸೆಯ,
ಮಾಗದ ನೋವಿನ
ಜೊತೆ, ಕಾದಿರುವೆ ಗೆಳತಿ....

ಕೊಲ್ಲುವ ನೋಟದೆ,
ಮೆಲ್ಲನೆ ನೋಡಿದೆ,
ಸುಳ್ಳಿನ ಆಟದೆ,
ಕಳ್ಳನ ಕರಗಿಸಿ
ಮೆರೆದೆ, ಕಾದಿರುವೆ ಗೆಳತಿ....

Tuesday, May 19, 2009

ನೀನಲ್ಲವೇ...???

ಮರದೆ ಮಿರುಗಿದ ಮಂದ ಗಾಳಿ ,
ಮೆಲ್ಲನೆ ತೇಲಿದ ತಂಗಾಳಿ,
ಸುರುಳಿ ಸುಂದರಿ ಸುಂಟರಗಾಳಿ,
ನೀನಲ್ಲವೇ ನನಗೆ ಗೆಳತಿ?

ಮೇಘ ಸಂಗಮದ ತುಂತುರು ಮಳೆ ಹನಿ,
ಹರಿವ ಕಾವೇರಿಯ ಸಿಹಿ ನೀರ ಹನಿ,
ಸಾಗರದಲೆಗಳ ನೀಲ ನೀರ ಹನಿ,
ನೀನಲ್ಲವೇ ನನಗೆ ಗೆಳತಿ?

ಹಣತೆಯ ಬೆಳಕಿನ ಹೊಳಪು,
ಚಂದ್ರನ ಬೆಳದಿಂಗಳ ತಂಪು,
ಸೂರ್ಯನ ಕಿರಣದ ನುಣುಪು,
ನೀನಲ್ಲವೇ ನನಗೆ ಗೆಳತಿ?

ಮನೆಯ ಬೆಳಗುವ ಕಿಚ್ಚು,
ಕೆರಳಿದ ಕೋಮಲೆ ಕಾಡ್ಗಿಚ್ಚು,
ಇರುಳನು ನಂದಿಸೋ ಕಿಚ್ಚು,
ನೀನಲ್ಲವೇ ನನಗೆ ಗೆಳತಿ?

ಹಸಿರು ತೊಟ್ಟ ಅಂದದ ಧರಣಿ,
ಜೀವ ಜಲ ತಂಗಾಳಿ ವರಿಸಿದ ಅವನಿ,
ಕೆಸರ ಹಸಿರಾಗಿಸೋ ಕರುಣಿ,
ನೀನಲ್ಲವೇ ನನಗೆ ಗೆಳತಿ?

Sunday, April 5, 2009

ದೀನ ನಾನಾದೆ!!!!

ದಿನಕರನ ದಯೆಕಾಣದೆ,
ದಿಗಂತದಲಿ ದಿಕ್ಕು ತೋಚದೆ,
ದಿನವೊಂದು ಯುಗವಾಗಿದೆ,
ಗೆಳತಿ!!! ನಿನ್ನೊಲುಮೆ ನನಗಿಲ್ಲದೆ.

ಚಿರ ಹರೆಯದ ಅರಿವಿಲ್ಲದೆ,
ಚಿಂತೆ ಮನೆ ಮಾಡಿದೆ,
ಚಿತೆಯ ಹಾದಿ ಹಿಡಿದಿದೆ
ಜೀವ, ಗೆಳತಿ!!! ನಿನ್ನೊಲುಮೆ ನನಗಿಲ್ಲದೆ.

ಕಡಲು ಕೆರಳಿದೆ,
ಕನಸು ಚದುರಿದೆ,
ಕವಿಗಿರುಳು ಕವಿದಿದೆ,
ಗೆಳತಿ!!! ನಿನ್ನೊಲುಮೆ ನನಗಿಲ್ಲದೆ.

ಕಣ್ಣು ಕಾದಿದೆ,
ಮನಸು ಬೇಡಿದೆ,
ಸನಿಹ ಬಯಸಿದೆ,
ನಿನ್ನ ಉಸಿರು ನನ್ನದೆ,
ನನ್ನ ಜೀವ ನಿನ್ನದೆ.

Saturday, March 28, 2009

ಯುಗಾದಿಯ ಶುಭಾಶಯಗಳು...

ನವ ವಸಂತ, ನವ ವರುಷಕೆ,
ಹೊಸತನವನು ತರಲಿ...
ಹೊಸ ಸಂವತ್ಸರ, ಹೊಸ ಚೈತ್ರದಿ,
ಹಳೆನೋವ್ಗಳ ಅಳಿಸಲಿ...
ಹೊಸ ವರುಷಕೆ,ಹೊಸ ವರುಷವು,
ಹೊಸ ಹರುಷವ ತರಲಿ...

ಬೇವು-ಬೆಲ್ಲದ, ಸಿಹಿ-ಕಹಿಯ
ಸಂಗಮವು ಸುಖವಾಗಲಿ...
ಸಂಗಮದ ಸವಿಯೊಂದಿಗೆ,
ಹೊಸ ಕನಸು ಚಿಗುರಾಗಲಿ...
ಹೊಸ ವರುಷಕೆ,ಹೊಸ ವರುಷವು,
ಹೊಸ ಹರುಷವ ತರಲಿ...

ಹೊಸ ದಿನದೆ,ಹೊಸ ನಗೆಯು,
ಕುಡಿಯೊಡೆದು ಹಸಿರಾಗಲಿ...
ಜೀವನದ, ಹೊಸ ದಾರಿಯಲಿ,
ನವ ಚೇತನ ಚಿಮ್ಮಲಿ...
ಹೊಸ ವರುಷಕೆ,ಹೊಸ ವರುಷವು,
ಹೊಸ ಹರುಷವ ತರಲಿ...

Tuesday, March 17, 2009

ನನ್ನೊಲುಮೆಯ ಅರಸಿ...

ನೋಟವೂ ನಿನದೆ, ಆಟವೂ ನಿನದೆ...
ಮಾಟದ ನೋಟಕೆ, ಮೋಹದ ಆಟಕೆ...
ಮಿಂಚಿನ ನೋಟಕೆ, ಸಂಚಿನ ಆಟಕೆ...
ನಾ, ನಾನಲ್ಲೆ ಬೆಡಗಿ!!! ನಾ, ನಿನ್ನಲ್ಲೆ ಕಣೆ ಹುಡುಗಿ..


ಭಾವವೂ ನಿನದೆ, ಬಂಧವೂ ನಿನದೆ...
ಬಯಕೆಯ ಬಂಧಕೆ,ಸೆಳೆತದ ಭಾವಕೆ
ಒಲವಿನ ಬಂಧಕೆ,ಉಳಿವಿನ ಭಾವಕೆ...
ನಾ, ನಾನಲ್ಲೆ ಬೆಡಗಿ!!! ನಾ, ನಿನ್ನಲ್ಲೆ ಕಣೆ ಹುಡುಗಿ..


ಕನಸು ನೀನಾದೆ, ಮನಸು ನೀನಾದೆ...
ಕಡಲಿನ ಕನಸಿಗೆ,ಮುತ್ತಿನ ಮನಸಿಗೆ..
ಕೆರಳಿದ ಮನಸಿಗೆ, ಅರಳಿದ ಕನಸಿಗೆ...
ನಾ, ನಾನಲ್ಲೆ ಬೆಡಗಿ!!! ನಾ, ನಿನ್ನಲ್ಲೆ ಕಣೆ ಹುಡುಗಿ..


ನೋಟವ ಆಟದೆ ಮುಳುಗಿಸಿ,ಭಾವವ ಬಂಧದೆ ಸಿಲುಕಿಸಿ..
ಮನಸನು ಕನಸಲಿ ತೇಲಿಸಿ, ಕಂಗೆಡದೆ ಕಣ್ಣೊರೆಸಿ,,
ಮೊಗದಲಿ ನಗೆ ಸುರಿಸಿ, ನಿನ್ ತನವ ನಿನ್ನಲೆ ಉಳಿಸಿ,
ನೀನಾಗೆ ನನ್ನೊಲುಮೆಯೆಡೆ ನಡೆದು, ನನ್ನೊಳಗೆ ಆವರಿಸೆ ನನ್ನರಸಿ...

Wednesday, March 4, 2009

ಮಾಸದ ಚೆಲುವು....

ಚಳಿಗಾಲದ ಚಳಿಯಲ್ಲಿ, ಕಂಡ ಚೆಂದದ ಚೆಲುವೆ ಯಾರೇ...
ಬೇಸಿಗೆಯ ಬೇಗೆ ಅಳಿಸಿದ ಮಂಜಿನ ಹನಿ ನೀ ಯಾರೇ...
ಮರೆಯಾಗುವುದು ಮರೆತು ಬಾರೆ,ಬಂದು ಮೊಗವ ತೋರೆ.

ಮಳೆಗಾಲದ ಮಸುಕಿನಲಿ, ಮರೆಯಾದ ಮಳ್ಳಿ ನೀನ್ಯಾರೇ...
ನವ ವಸಂತದ ಚೆಲುವೆ, ನೀನೇ ಬೆಳಕು, ನೀನೆ ತಾರೆ...
ಕನವರಿಸಿದೆ ಮನ, ಕಣ್ಣ ರೆಪ್ಪೆಯಲಿ.. ಬಂದು ಕೂರೆ.

ಮಾಘಿಯ ಗಾಳಿಗೆ ಮಾಗದ ಅಂದದ ಒಡತಿ ಯಾರೇ...
ಮಧುಮಾಸದ ಮೊದಲ ಮಾವಿನ ಚಿಗುರೆ...
ತಂಗಾಳಿಯ ತವಕದಲೆ ಕಾದಿರುವೆ ಓ ಉಸಿರೇ..
ತಡಮಾಡದೆ ಬಾ ಸಖಿ... ಬಾಳ ಕೆಸರೋರೆಸಿ ಹಸನಾಗಿಸೆ ಬಾರೆ....

Tuesday, February 24, 2009

Office ಮುಂದಿನ ಅಂದ...

ಕೂತಿರುವ ಸಾಲ ಕಂಡೆಯ ಕಂದ???
ಒಂದೊಂದು ಹಕ್ಕಿಯದು ಒಂದೊಂದು ಚೆಂದ.
ಒಂದರ ಹಲ್ಲು ನೋಡಲು ಸ್ವಲ್ಪ ಮುಂದ,
ಹತ್ರ ಹೋಗೋನ ಬುದ್ದಿ ಸ್ವಲ್ಪ (ಜಾಸ್ತಿ) ಮಂದ!!!

ಒಂದು, ಕಣ್ಣು ಕಮಲ? ನೋಡೋನ ಜೀವ ಜಿಲಜಿಲ..
ಎರಡು, ಮೂಗು ಸಂಪಿಗೆ? ಸುಳಿದರೆ ಸುತ್ತ ಸುಡುವುದು ಮೈ ಕೆಂಪಗೆ..
ಮೂರು, ಕೆನ್ನೆ ಆಪಲ್? ಅಲ್ಲಲ್ಲಿ (ಎಲ್ಲಕಡೆ) ನಗುತಿತ್ತು ಪಿಂಪಲ್...
ನಾಲ್ಕು, ತುಟಿ ದಾಳಿಂಬೆ? ಯಾವ ದಾಳಿಗೂ ಜವಾಬಿಲ್ಲ ಅದು ಗೂಬೆ...
ಐದು, ಹುಬ್ಬು ಬಾಗಿದ ಕಬ್ಬು? ಕಾಲ್ಕೇಜಿ ಮೈಯೆಲ್ಲಾ ಬಾರಿ ಕೊಬ್ಬು..
......
.......
........
.........

Friday, February 13, 2009

ಹಾಲು-ಜೇನು

ಮನಸಲ್ಲಿ ಮೂಡಿದ ಮೌನದ ಮಾತೆ ನೀನು,
ಮನೆಯೆಲ್ಲ ಮೆರೆದ-ಮುರಿದ ಮಾತಿನ ಮೌನ ನೀನು.

ಮುದ್ದು ಮಗುವಿನ ಮೊಗದ ಮೊಸಳೆ ನೀನು,
ಮೊಸಳೆ ಮೊಗದವ, ನಿನಗಿಂತ ಲೇಸು ನಾನು.

ಮೃಗದ ಮನಸಿನ, ಗೋವಿನ ರೂಪ ನೀನು,
ಗೋವೆಂದು ನಂಬಿ ನೀರಾದೆ ನಾನು.

ಮುಂಗಾರಿನ ಮೇಘದಂತೆ ಕಂಡೆ ನೀನು,
ಮಿಂಚು-ಸಿಡಿಲಾಗಿ ಕಾಡಿದೆ ನೀನು.

ವಂಚನೆಗೆ, ಬೆಂದ ಜೀವ ನಾನು
ಜೀವದೊಳಗಿನ ಕ್ರೋದ ತೊರೆಯೇ ನೀನು,
ಬಾಳಾಗುವುದು ಆಗ ಹಾಲು-ಜೇನು.

Tuesday, January 20, 2009

ಉಸಿರುಸಿರ ಬೆಸುಗೆ.....

ಕನಸಿನ ಕುಂಚದಲಿ ಕಣ್ಣ ಹಿಂಡಿದರೆ,
ಕಲೆಯ ಗತಿಯೇನು ಹೇಳೆ ಗೆಳತಿ!!
ಕಾರ್ಮೋಡ ಕಾವಿನಲಿ ಕಾರಿದರೆ,
ಕಾಯ, ಕಳೇಬರವೆ ನಿಜ ಕೇಳೆ ಗೆಳತಿ!!

ಮಾಗದ ಮನಸಿಗೆ ಮಾಘಿಯ ಗಾಳಿಯ ತಂದೆ,
ಮರುಗಿ ಮಣ್ಣಾಗಿದೆ ಮನ ನೋಡೆ ಗೆಳತಿ!!
ಮೋಹದ ಮಾಯೆಯಲಿ ಮರೆತು ಮಿಂದೆ,
ಮೌನ ಮೆರೆದಿದೆ, ಮೊಗ ಸೊರಗಿದೆ ಅರಿಯೆ ಗೆಳತಿ!!

ಕಣ್ಣ ಹನಿಗಳ ಅಳಿಸೆ, ಕಾಣದ ನಗೆ ತರಿಸೆ,
ಮಳೆ ಹನಿಗಳ ತಂಪಾಗಿ ಸುರಿಸೆ ಗೆಳತಿ!!
ಮಾಯೆಯ ಮರೆಸಿ, ಮೂಗನ ನುಡಿಸೆ,
ಚಿಂತೆಯ ಚಿತೆಗೆ ಕಳಿಸಿ,ಮರುಗಿದ ಮಾನವ ಮೆರೆಸಿ,
ಕಾಯುತಿಹ ಉಸಿರ ಹೆಸರಿಸಿ, ಉಸಿರುಸಿರ ಬೆರೆಸೇ ಗೆಳತಿ!!!!!!

Wednesday, January 7, 2009

ಹೊಸ ವರ್ಷದ ಶುಭಾಶಯಗಳು....

ಚಿರಕಾಲದ ಚಿಂತೆಗಳು, ಚಿರ ಶಾಂತಿಗೆ ತೆರಳಲಿ
ನೂರ್ಕಾಲದ ಆಸೆಗಳು, ನೋರೆಹಾಲಂತೆ ಹೊಳೆಯಲಿ
ಜಗದೊಳಗೆ, ಜಯವೆಂಬುದು, ನಿನ್ ಹೆಸರಲಿ ಜೇಂಕರಿಸಲಿ
ಹೊಸ ವರುಷಕೆ,ಹೊಸ ವರುಷವು,ಹೊಸ ಹರುಷವ ತರಲಿ

ನದಿ-ನದಗಳು ಕುಣಿದಾಡಲಿ, ಝರಿ-ತೊರೆಗಳು ತುಳುಕಳಿ
ಹೊಸ ವರುಷಕೆ, ಭೂ ಮಾತೆಯು ಹೊಸ ವೇಷವ ತೋರಲಿ
ಹೊಸ ವಸಂತದೇ, ಹೊಸ ಹಸಿರು, ಹೊಸದೆ ಚಿಗುರೊಡೆಯಲಿ
ಹೊಸ ವರುಷಕೆ,ಹೊಸ ವರುಷವು,ಹೊಸ ಹರುಷವ ತರಲಿ

ಹೊಸತನದ, ಹೊಸ ಬಯಕೆಯೂ ಹೂವಂತೆ ಅರಳಲಿ...
ಕೆಸರಾಗಿಹ ಹೆಸರು, ಹೊಸ ಬೆಳಕಲಿ ಬೆಳಗಲಿ
ಹೊಸತೆ, ಹೊಸ ಬಾಳಿನ ಹಾದಿಗೆ ನಂದದ ದೀಪವಾಗಲಿ
ಹೊಸ ವರುಷಕೆ,ಹೊಸ ವರುಷವು,ಹೊಸ ಹರುಷವ ತರಲಿ!!