Google Search

Custom Search

Thursday, December 16, 2010

ಮಿತಿ...

ಮತಿ ಹೀನ ನಾನಾದೆ ಒಲವೆ,
ನಿನ್ನ ಒಲವಿನ ಮಿತಿಯ ಮರೆತು,
ಇನ್ಯಾರೆ ಗತಿ ನನಗೆ ಒಲವೆ,
ನೀನಿರದ ಈ ಕ್ಷಿತಿಯ ಮಿತಿಯ ಒಳಗೆ...

ಬಿರುಗಾಳಿ ಬೀಸುತಿದೆ ಮನದೊಳಗೆ,
ತನ್ನ ತಾಳ್ಮೆಯ ಗತಿಯ ಮೀರಿ,
ತಂಗಾಳಿಯಾಗಿ ನೀನೆಂದು ಬರುವೆ
ಎನ್ನ ಒಲುಮೆಯನು ಬಯಸಿ,
ನಿನಗಾಗಿ ಕಾದಿರುವೆ ಈ ಕ್ಷಿತಿಯ ಮಿತಿಯ ಒಳಗೆ...

ಸುಡುತಿರುವ ಬೆಂಕಿಯನು ಸಹಿಸಲಾರೆನು ಒಲವೆ,
ಚ್ಯುತಿಗೊಳಿಸೆ ಬೆಂಕಿಯ ಸ್ಥಿತಿ
ಸ್ವಾತಿ ಮಳೆಯನು ಸುರಿಸಿ,
ಮತಿಯ ಗತಿ ಬದಲಿಸುವ ವಿಸ್ಮಯ ಶಕ್ತಿ,
ಸ್ತುತಿ ಮಾಡಿ ಕಾದಿರುವೆ ಈ ಕ್ಷಿತಿಯ ಮಿತಿಯ ಒಳಗೆ...

Wednesday, December 8, 2010

ಮುಗ್ದ ಮಂದಹಾಸ...


ಉದ್ದ ಮೊಗದ ಮುಗ್ದೆ ಯಾರೆ?
ಮುದ್ದು ಮಂದಹಾಸ ತೋರೆ,
ಮದ್ದು ಗುಂಡು ಬೇಡ ಬಾರೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೊಲ್ಲಲು...


ಪೆದ್ದನಾಗಿ ಬಿದ್ದೆನಲ್ಲೆ,
ಗುದ್ದಿಯಾದರೂನೂ ಕೊಲ್ಲೆ,
ಗೆದ್ದ ಮನವ ಅಳಿಸಲೊಲ್ಲೆ,
ಮುಗ್ದ ಮಂದಹಾಸ ಸಾಕೆ
ಮುದ್ದು ಮನಸ ಕೆಡಿಸಲು...


ಒದ್ದೆ ಮೈಗೆ ಚಳಿಯ ಹಾಳೆ,
ಎದ್ದು ಬಿದ್ದು ಬಂದೆ ಕೇಳೆ,
ಕದ್ದು ನೋಡೋ ಆಟ ನಿಲಿಸಿ
ಜಿದ್ದನೆಲ್ಲ ಮರೆಗೆ ಸರಿಸಿ,
ಮುಗ್ದ ಮಂದಹಾಸ ತೋರೆ
ಮುದ್ದು ಮನಸನುಳಿಸಲು....

Monday, November 29, 2010

ಮುದ್ದು ಮನಸು...

ಎಳೆ ಎಳೆಯಾಗಿ ಹೆಣೆದ,
ಎಳೆ ಮೊಗದ ನಿನ್ನಂದ,
ಇಳೆ ಮೇಲೆ ಕಂಡಾಗಿನಿಂದ,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

ಎಲೆ ಮೇಲಿನ ನೀರ ಬಿಂದು,
ತಿಳಿ ಮೊಗದಲಿ ಕಂಡೆ ಅಂದು,
ಹೊಳೆಯುತಲಿರುವ ನಿನ್ ಕಣ್ಣ ಕಂಡು,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

ಚಳಿ ರಾತ್ರಿಯಲಿ ಚಂದಿರನ ಕಂಡು,
ಬಿಳಿ ಹಾಲ ಹೊಳೆಯಲ್ಲಿ ಮಿಂದು,
ಬಳೆಗಳ ಸದ್ದಲಿ ಹದವಾಗಿ ಬೆಂದು,
ಬೆಳಗಾಗಲೆದ್ದು ಮೊಗವ ಮತ್ತೆ ಕಂಡು,
ಅಲೆ ಅಲೆಯಾಗಿ ನುಲಿದಾಡುತಿದೆ ಈ ಮುದ್ದು ಮನಸು..

Tuesday, November 23, 2010

ಚುಕ್ಕಿ...

ಕತ್ತಲೆ ರಾತ್ರಿಯಲಿ,
ಮೆತ್ತನೆ ಸುಳಿದಾಡಿದೆ ಗೆಳತಿ,
ಹೊತ್ತು ಮುಳುಗಿದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಬೆತ್ತಲೆ ಬಾನಿನಲಿ,
ಎತ್ತ ನೋಡಲೇ ಗೆಳತಿ?
ಕತ್ತು ಬಾಗದು ಕೆಳಗೆ ಹೊತ್ತು ಹತ್ತಾದರೂ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

ಕಿತ್ತಳೆ ತೋಟದಲಿ,
ಸುತ್ತ ಅಲೆದಾಡಿದೆ ಗೆಳತಿ,
ಚಿತ್ತಾರ ಬಿಡಿಸಿದ್ದೆ ನೀ ನನ್ನ ನೆತ್ತಿ ಮೇಲೆ,
ಮತ್ತೆ ಮತ್ತೇಕೆ ಮಿನುಗುವೆ ನೀ ಚುಕ್ಕಿಯಂತೆ...

Thursday, October 28, 2010

ಮೌನ...

ಕರೆದು ಕೆರದಾಗ್ ಹೊಡ್ದಾಂಗ್ ಕೇಳು,
ನೀನು ಕ್ರೂರ ಪ್ರಾಣಿ||
ತಲೆ ಕೆರ್ಕೊಂಡ್ ಕೂತ್ಕೊಂಡಿದ್ರೆ,
ನೀನೆ ಪರಮ ಜ್ಞಾನಿ||

ಮಾಡಿದ್ ತಪ್ಪು ಅಂತ್ಹೇಳಿದ್ರೆ,
ಬೀಳ್ತಾವ್ ಮೆಟ್ನಾಗ್ ಏಟು||
ತಪ್ಪೇನಿಲ್ಲಾಂತ ತೆಪ್ಪಗಿದ್ರೆ
ಆಹಾ!! ನೋಟೆ ಇಲ್ದೇ ವೋಟು||

ಮಾತು ಮನೆ ಕೆಡ್ಸುತ್ತಾಂತ
ಗೊತ್ತಿದ್ರೂನೂ, ಬೇಕೋ ನಿಂಗೆ ಮಾತು??
ಏನು ನಿಂಗೆ ಗೊತ್ತಿಲ್ಲಾಂತ, ನಿನ್ನ ಬಾಯ್ನ
ಮುಚ್ಕೊಂಡಿದ್ರೆ, ಮುಚ್ಕೊತಾವೆ ತೂತು.....

Friday, October 22, 2010

ಹುಸಿಯಾದೆ ನೀನು...

ನೀರಲೆಯ ನೊರೆ ಮೇಲೆ ಮೆಲ್ಲ-ಮೆಲ್ಲನೆ ನಡೆವೆ,
ನೂರಾರು ಸಾಲುಗಳ ಒಂದೇ ಮಾತಲಿ ನುಡಿವೆ,
ಇನ್ಯಾರು ಬಂದರು ನಮಗಿಲ್ಲ ಇಂದು-ನಾಳೆಯ ಗೊಡವೆ,
ಕಣ್ಣೀರು ಸುರಿಸದಿರು ಉಳಿಸು ನನ್ನ, ಓ ಒಲವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.

ಊರೆಲ್ಲ ಅಲೆದರು, ಮನದಲ್ಲಿ ನಿನ್ನ ಜಪ ಒಲವೆ,
ಕರೆಯಲ್ಲೂ ನೀನಿರುವೆ, ಕಾರಣವು ನಿನ್ನ ನಡುವೆ?
ಕೊರಳಲ್ಲೆ ಉಳಿದಿರುವೆ, ಕೋಪವಿರುವುದೆ ನಮ್ಮ ನಡುವೆ?
ಕರುಣೆಯಲೆ ಕನಿಕರಿಸೇ, ಮನದಾಳದಿಂದ ನಿನ್ನ ಕರೆವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.

Thursday, October 21, 2010

ನೀರಲೆ...

ನೀರಲೆಯ ಮೇಲೆ ನಡೆವ ಓ ನೀರೆ,
ನನ್ನೆಡೆಗೆ ನಡೆದು ನೀ ಬಾರೆ,
ಎಳೆಬಳ್ಳಿ ಕಟಿಯ ಓ ಚೆಲುವೆ,
ನಿನ್ನೆಡೆಗೆ ಸೆಳೆದೆ ನನ್ನೊಲವೆ,
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.

ಸುರನರರ ಮರೆಸುವ ಚೆಲುವೆ,
ಸುರಪಾನದಾ ಮತ್ತನೀನಳಿಸುವೆ,
ಹುಸಿಯಾಟ ಆಡದಿರು ನೀ ಒಲವೆ,
ಬಿಸಿನೋಟ ಯಾಕೆ? ಸಾಕು ನಿನ್ ನಗುವೆ
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.

Tuesday, October 19, 2010

ಅನ್ನ-ಹೊನ್ನು-ಮಣ್ಣು...

ಹುಡ್ಕೋಂಡ್ ಹೋದೆ ಚಿಲ್ಲಿ ಚಿಕನ್ನು,
ಸಿಕ್ಕಿದ್ ಮಾತ್ರ ಖಾಲಿ ಬನ್ನು,
ಹೊಟ್ಟೇನ್ ಸೇರಿತ್ತ್  ಅವನ ಬೆನ್ನು,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು,

ಉಣ್ಣೋಕೆ ಬೇಕಾ ಅಷ್ಟೊಂದ್ ಹೊನ್ನು?
ಬದ್ಕೋಕ್ ಬೇಕಾದಷ್ಟು ತಿನ್ನು,
ಸತ್ಯ ನೀನು ತಿಳ್ಕೊ ಗೆಳೆಯ,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು......

Thursday, October 7, 2010

ತನುವ ಬಿಸಿ...

ಅರಿತು ಬಾಳುವ ಒಂದು ಮುಗ್ದ ಜೀವ!
ಮರೆಸುವುದು ಮನದ ಎಲ್ಲ ನೋವ,
ತಣಿಸುವುದು ತನುವ ಬಿಸಿಯ ಕಾವ,
ಖುಷಿಯಲೇ ಕುಣಿಸುವುದು ಈ ಮುದ್ದು ಮನವ...

Tuesday, September 28, 2010

ಸವಿ-ಮಾತು...

ಗೆಳತಿ ನಿನ್ನ ಆ ಒಂದು ಮಾತು,
ಮತ್ತೆ ಉಸಿರ ಹರಿಸಿತು
ಜೀವಕೆ, ನೆನಪಿಸಿತು
ಒಮ್ಮೆ ಸೋತು ಆಡಿದ ಮಾತು,
ಎನ್ನೊಲುಮೆಗೆ ಬಂದು ಕೊಡುವೆಯ ಸವಿ, ಮುತ್ತು?
ನುಡಿಯೆಲೇ ಗೆಳತಿ ಆ ಒಂದು ಸವಿ-ಮಾತು,
ಮನದ ವೇದನೆಯ ಅರಿತು, ಮನದೊಳಗೆ ನೀ ನೆಲೆ ನಿಂತು....

Monday, September 13, 2010

ಜೊತೆ ನಡೆವೆಯಾ???

ನನ್ನೊಲುಮೆಯ ವೀಣೆ ತಂತಿಯ,
ಮಿಡಿಸದೆ ನಲ್ಲೆ ಮುರಿದೆಯಾ?? 
ಹಿತವಾದ ನನ್ನ ಒಲುಮೆಯಾ,
ಮಿತವಾಗಿ ನುಡಿದು ಮರೆತೆಯಾ??
ತಿಳಿಯಾದ ಈ ನನ್ನ ಪ್ರೀತಿಯ,
ಅಳಿಸಿ ನೀ ಮುಂದೆ ನಡೆದೆಯಾ??
ಒಂದೇ ಬಯಕೆ ಗೆಳತಿ ಅರಿವೆಯಾ??
ಕೊನೆವರೆಗೂ ಜೊತೆ ನಡೆವೆಯಾ??

Tuesday, August 31, 2010

ಕವನ...

ಗೀಚಿರೋದು ನಾಲ್ಕೇ ನಾಲ್ಕು ಕವನ,
ಒಂದೊಂದೂ ಮರೆಸಿದೆ ಏಕಾಂಗಿ ಜೀವನ,
ಸಹಜ ಸಾಲುಗಳೇ ನಿಮಗೆ ನಮನ,
ತೆಗಳಿಕೆಯ ಮಾತುಗಳು ಕಲಕುವುದು ಮನ,
ಮತ್ತೆ ತೆಗಳುವು ಮುನ್ನ, ಇರಲಿ ಇತ್ತಕಡೆ ಗಮನ...

Tuesday, August 24, 2010

ಆಕೆ - ಓಕೆ

ಆಕೆ, ಓಕೆ,
ಹತ್ತಿರ ಹೋದೆ ನೋಡೋಕೆ,
ಕೈಯಲ್ಲಿ ಕಂಡಿತು ಕಸಪೊರಕೆ,
ನನಗನ್ನಿಸಿತು, ಈ ಮಾರಿ ಬೇಕೇ?
ಆಕೆ ಓಕೆ, ಆದ್ರೂ ನಮ್ಗೆ ಈ ಆಕೆ ಯಾಕೆ ಯಾಕೆ???

Thursday, August 5, 2010

ಶರ್ಟು-ಪ್ಯಾಂಟು

ಮೇಲ್ ಬ್ಲಾಕ್ ಇದ್ರೆ, ಕೆಳಗೆ ಯಾವ್ದಾದ್ರು ಓಕೆ..
ಕೆಳಗೆ ಬ್ಲಾಕ್ ಇದ್ರೆ, ಯಾವ್ ಮೇಲ್ ಆದ್ರು ಓಕೆ....

Thursday, July 1, 2010

ಅರಿವು...

ಏಕೋ ಕೋಲಾಹಲ, ಏನೋ ಕುತೂಹಲ,
ಮನ ಮಿಡಿದಿದೆ ಮನಸೆ ವಿಲ-ವಿಲ,
ಸೆಳೆವು ನಿನ್ನೆಡೆ ಗೆಳತಿ ಪ್ರತಿಸಲ,
ನಾಚಿ ನೀರಾದೆ ನೀ ಒಂದ್ಸಲ,
ಮರೆತು ಬಾಳುವುದು ಗೋಳು ನೀ ಅರಿಯಲ||

ಅರಿತು ಅರಿಯೆನು ಚಿತ್ತ, ನಿಜ ನುಡಿಯಲ?
ಒಲವನೀಕಡೆ ಹರಿಸೆ ಸವಿ ಉಣಿಸಲ?
ಹನಿ ಹನಿ ಪ್ರೀತಿ ಮಳೆ ಒಮ್ಮೆ ಸುರಿಸಲ,
ಮರೆತು ಬಾಳುವುದು ಗೋಳು ನೀ ಅರಿಯಲ||

Friday, June 4, 2010

ಮಳೆ...

ಸುರಿ ಸುರಿವ ಮಳೆಯಲ್ಲಿ, ಸರ ಸರನೆ ಮುನ್ನುಗ್ಗಿ,
ಭರ ಭರನೆ ಬರುತಿರುವ ಅಶ್ರುಧಾರೆಯ ಅಳಿಸಿ,
ಸುಡು ಸುಡುವ ಎದೆಯ, ಎಡವದೆಲೆ ನಡೆಸಿ,
ಓಡೋಡಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ...

ಚಿಟ-ಪಟ ಜಡಿ ಮಳೆಯಲ್ಲಿ, ಪಟ-ಪಟ ನುಡಿವ ಮಾತಿನಮಲ್ಲಿ,
ಕೆಟ್ಟ ಹಠವನು ಚೆಲ್ಲಿ, ಮುಟ್ಟದೆ ಮನವನು ಗಿಲ್ಲಿ,
ಬೆಟ್ಟದೆತ್ತರದ  ಆಸೆ ಚಿಗುರೊಡೆಸಿ, ತೊರೆಯದೆ ಬೆಳೆಸಿ,
ಎತ್ತೆತ್ತಲೋ ಸುತ್ತಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ...

ಜಿನುಗೊ ತುಂತುರು ಮಳೆಯಲ್ಲಿ, ನೆನೆದು ನಿಂತಳು ಮನದಾಳದಲ್ಲಿ,
ತುಸು-ಪಿಸು ಕಂಡ ಮೊಗದ ಮಂದಹಾಸದಲಿ,
ಪಿಸು-ಗುಸು ನುಡಿದ ಮೃದು ಮಾತಿನ ಮೋಡಿಯಲಿ,
ಮುಳುಗಿ ಮರೆಯಾಗಿ, ಮರಳಿ ತೇಲಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ...

Thursday, June 3, 2010

ಬೆಸ್ತರ ಹುಡುಗಿ...

ತುಂತುರು ಮಳೆಯಲಿ ನಿಂತರೆ ಸಾಲದು,
ಅಂತರ ಸಹಿಸದ ಒಂಥರ ಅನುಭವ,
ಹತ್ತಿರ ಬರಲು ಎತ್ತರ ಸಡಗರ,
ಉತ್ತರ ನೀಡೆಲೆ ಬೆಸ್ತರ ಹುಡುಗಿ...

Wednesday, June 2, 2010

ಅಪರಿಚಿತ...

ಗೆಳತಿ ನಿನಗೆ ನಾ ಅಪರಿಚಿತ,
ನಿನ್ನ ಪ್ರೀತಿಯಲಿ ನಾ ಪರೀಕ್ಷಿತ,
ಮನದೊಲುಮೆಯ ಮಿತಿ ಅಪರಿಮಿತ,
ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ,
ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,

ಎಷ್ಟಾದರೂ ನಿನಗೆ ನಾ ಅಪರಿಚಿತ,
ಕೊಂಚ ದಯಪಾಲಿಸಿ ಪ್ರಿಯೆ ಇತ್ತ,
ಒಂದಾಗಿ ಆಗುವೆ ನಾ ನಿನಗೆ ಪರಿಚಿತ,
ಒಲವ ಸವಿಯ ಸವಿಯೋಣ ಗೆಳತಿ ಜೀವನ ಪರ್ಯಂತ...

Monday, March 29, 2010

ಮೈನು ರೋಡು...


ನಾನೊಂದು ಮೈನು ರೋಡು,
ನನಗಾಗಿ ನೂರಾರು ಬೋರ್ಡು,
ಬೋರ್ಡು ಬರಿ ಎ ಸಿ ಗೂಡು,
ಕೇಳೋರಿಲ್ಲ ನನ್ನ ಪಾಡು,
ನಾನೇ ನಿಮ್ಮ ಹೊಂಡದ ರೋಡು... 

Sunday, March 28, 2010

ನೋವ ನರಕ

ಮುದ್ದು ನಗೆಯ ಮೆಲ್ಲ ಚೆಲ್ಲಿ,
ಕದ್ದು ಹೋದೆ ಮನವ ಕಳ್ಳಿ,
ಅಂದದರಸಿ ಮೊಗವು ಬೆಳ್ಳಿ,
ಆದರವಳು ಹುಟ್ಟು ಸುಳ್ಳಿ,
ಕಾಣದಾದಳು, ನನ್ನ ಚಿತೆಗೆ ತಳ್ಳಿ,
ನೋವ ನರಕದೊಳಗೆ ತಳ್ಳಿ...

ಮೆಂಟಲ್ ಮನಿ...

ನನ್ನ ಗೆಳ್ತಿ ಒಂದ್ ಚೂರ್ ದದ್ದಿ,
ಅವಳ್ನ ನಾನು ತಿದ್ದಿ ತಿದ್ದಿ,
ಖಾಲಿಯಾಯ್ತು ನನ್ನ ಬುದ್ಧಿ,
ಮನಿ ಮನ್ಸು ಶುದ್ಧಿ ಶುದ್ಧಿ,
ಊರ್ನಾಗಾಯ್ತು  ದೊಡ್ ಸುದ್ದಿ,
ಕೊನೀಗ್ ಮೆಂಟಲ್ ಮನೀನಾಗ್ ಬಿದ್ದಿ..

Thursday, March 25, 2010

ವೋಟು-ಏಟು...

ನಿಮ್ಮ ಒಂದೇ ಒಂದು ವೋಟು,
ಅದು ತುಂಬಾ ತುಂಬಾ ಗ್ರೇಟು,
ಬೀಳ್ತಾವ್ ಧರ್ಮದ ಏಟು,
ಕೊಡೋಕ್ ಬಂದ್ರೆ ನೋಟು...
ಹುಷಾರ್, ಇದು ನನ್ನ ವೋಟು...

Monday, March 22, 2010

ಬಿರುಗಾಳಿ...

ತುದಿಗಾಲಲಿ ನಿಂತವಗೆ ತೂರಿಬಂದ ತಂಗಾಳಿ,
ತನುವೆಲ್ಲವ ತಂಪಾಗಿಸಿದೆ ನೀ ಸಿಹಿಗಾಳಿ,
ತನುವಿನವನ ಮನ ಮಿಡಿಸಿದ ಮೆಲುಗಾಳಿ,
ಮಿಡಿವ ಮನದ ದಗೆಯೇರಿಸಿದ ಸುಡುಗಾಳಿ,
ಮನ ಮಿಡಿಸಿದ ಮನದನ್ನೆಯ, ಮನದೊಲುಮೆಗೆ
ತರದೆ, ದೂರದೂರಿಗೆ ಸರಿಸಿದೆ ನೀ ಬಿರುಗಾಳಿ....

ಬಿಳಿ ಟೋಪಿ

ತಲಿ ಮ್ಯಾಲ ಬಿಳಿ ಟೋಪಿ,
ಮೋಸ ಮಾಡೋ ಪಾಪಿ,
ಮಾತ್ಗೆ ನಿಂತ್ರ ಮೂರ್ತರೂಪಿ,
ಮನ್ಸು ಕರಾಳ ಕುರೂಪಿ....

Friday, March 19, 2010

ಕಾರು-ಬಾರು

ವಾಹ್-ವಾಹ್ ಸೂಪರ್ ಕಾರು,
ಡ್ರೈವರ್ ಹಾಕಿತ್ತು ಬೀರು,
ಮಲ್ಗಿತ್ತು ಫುಲ್ ಊರು,
ಮಿತಿ ದಾಟಿತು ಕಾರಿನ ಕಾರುಬಾರು,
ಮಿತಿಯಲ್ಲಿ ಮಲ್ಗಿದ್ದವರ ಜೀವ ಏರಿತು ಬಿದಿರ ತೇರು... 

Thursday, March 18, 2010

ಸಂದಿ ಸೀಟು

ಮುಂದೆ ಸೀಟಲಿ ಮೆತ್ತಗೆ ಕುಳಿತ ಮುಗುದೆ,
ಹಿಂದೆ ಸೀಟಿನ ನನ್ನಲಿ ಏಕೆ ತಗಾದೆ,
ಸಂದಿ ಸೀಟಿಗೆ ಮಂದಿ ಮುಂದಿ ಗಲಾಟೆ ತೆಗೆದೆ,
ಹಿಂದೆ ಮುಂದೆ ನೋಡದೆ ಓಡುವುದೆ ಉತ್ತಮ ತಿಳಿದೆ,
ತಿರುಗಿ ನೋಡದೆ ಅಲ್ಲಿಂದ ಮನೆಕಡೆ ನಡೆದೆ...

Friday, March 12, 2010

ಲೇಡಿ-ಕೇಡಿ

ರೋಡ್ ಮೇಲ್ ಹೊಯ್ತಿತ್ತು ಲೇಡಿ,
ಲೇಡಿ ಹಾಕಿತ್ತು ಚೂಡಿ,
ಲೇಡಿನ ನೋಡ್ದ ಕೇಡಿ,
ಕೇಡಿ ನೋಟ ಸಿಡಿ ಸಿಡಿ,
ಲೇಡಿ ನೋಡಿ ಸಿಡಿ ಮಿಡಿ,
ಕೇಡಿ ತೆಗ್ದ ಬೀಡಿ,
ಲೇಡಿ ಮನಿ ಕಡಿ, ಕೇಡಿ ಮಸಣದ್ ಕಡಿ...

Thursday, January 21, 2010

ನಿನಗಾಗಿ...

ಕಣ್ಣ ಅಂಚಿನಲೆ ಕರೆದವಳೇ,
ಕಣ್ಣ ನೋಟದಲೆ ಕೊಂದವಳೇ,
ಕಣ್ಣ ಬೆಳಕಲೆ ಬಾಳ ಬೆಳಗಿದವಳೇ,
ಕಣ್ಣು ಮರೆಸಿ ದೂರದೂರಿಗೆ ಸರಿದೆಯಲ್ಲೇ?
ಕಾದಿರುವೆ ನಿನಗಾಗಿ||

ನಿನ್ನ ನೋಡುವ ಸಲುವಾಗಿ,
ನಿನ್ನೊಂದಿಗೆ ಒಂದಾಗುವ ಹಿತಕಾಗಿ,
ಕಡೆಯಲಿ ನಿನ್ನಲ್ಲೇ ಮಣ್ಣಾಗುವ ಸಮಯಕ್ಕಾಗಿ,
ಕಾದಿರುವೆ ನಿನಗಾಗಿ||