Google Search

Custom Search

Saturday, November 2, 2013

ಎರಡು ಮನಗಳು...

ಎರಡೇ ದಿನ ಸಾಕೆನಗೆ ನಿನ್ನ ಮನವನರಿಯಲು,
ಎರಡು ಕ್ಷಣ ಸಾಕೆನಗೆ ನಿನ್ನ ಮನವೊಲಿಸಲು,
ಎರಡು ಮಾತು ಸಾಕೆನಗೆ ನಿನ್ನ ಈ ಜಗವ ಮರೆಸಲು,
ಎರಡು ಯೋಚನೆ ಏಕೆ ಗೆಳತಿ ಒಮ್ಮೆ ಸಮ್ಮತಿಸು,
ಎರಡು ಮನಗಳು ಒಂದಾಗಲಿ ಈ ಅಮೃತ ಘಳಿಗೆಯಲಿ...

ಎರಡು ಕಣ್ಣುಗಳಲ್ಲಿ ಮೊದಲಾಯಿತು ಮೊದಲ ಪ್ರೀತಿ,
ಎರಡು ತುಟಿಗಳು ಅರಿತು, ನಿವೇದಿಸಿದವು ನಿನ್ನಲಿ,
ಎರಡು ಕಣ್ಣೀರ ಹನಿ, ಕೋಪ ಕರಗಿಸುವ ರೀತಿ,
ಎರಡು ನೀರ ಹನಿ, ಜೀವ ಉಳಿಸುವ ರೀತಿ,
ಎರಡು ಮಾತನಾಡದೆಯೆ ಒಪ್ಪಿಕೋ ನೀನು ಒಲವ ಒಡತಿ...

ಎರಡು ಹುಸಿ ಮುನಿಸು ಬರುವುದು ಪ್ರೀತಿಯಲಿ,
ಎರಡೆರಡು ಮಾತಲ್ಲಿ ಚುಚ್ಚುವರು ಜಗದಲ್ಲಿ,
ಎರಡೇ ದಿನದ ಮುನಿಸು ಅರ್ಥವಾಗದೆ ನಿನಗೆ?
ಎರಡು ಸುಳ್ಳಾಡಲು ನೀನು ಎರಡು ದಿನದ ಕೋಪ ನನಗೆ,
ಎರಡಕ್ಷರದ ಪ್ರೀತಿ ಎಂದಿಗೂ ಸುಳ್ಳಲ್ಲ ಗೆಳತಿ,
ಜಗವೇ ಎರಡಾದರೂ, ಜೀವದಾಕಾರ ಅಳಿದರೂ,
ಗಾಳಿಯಲಿ ಬೆರೆತ ಉಸಿರಲ್ಲೇ ಪ್ರೀತಿಸುವೆ ನಿನ್ನ ನಾನು....

Thursday, October 17, 2013

ಕರಗುತಿದೆ ಹರೆಯ....

ಆಗಬೇಕಿದೆ ಕನಸುಗಳ ವಿನಿಮಯ,
ಎಂದು ಬರುವುದು ಗೆಳತಿ ಆ ಸವಿ ಸಮಯ,
ಒಂದು ಸಲ ಆಗಿ ಬಿಡಲೇ ನಾ ನಿನ್ನ ಇನಿಯ,
ಒಲವು ಮೂಡಿದ ಘಳಿಗೆ ಮಧುರ ಪ್ರಣಯ....

ಭಾಷೆ ಬೇಕಿಲ್ಲ ಕಣ್ಣುಗಳು ಹೇಳುತಿವೆ ವಿಷಯ,
ಖಚಿತವಿದು ಪ್ರೇಮ ನನಗಿಲ್ಲ ಸಂಶಯ,
ಸಾಲಾಗಿ ಹೇಳೆ ಗೆಳತಿ ಏನು ನಿನ್ನ ಆಶಯ,
ಕೊಂಚವೂ ಸುಳ್ಳಿಲ್ಲ ತೀರಿಸುವೆ ನಿನ್ನೆಲ್ಲ ಬಯಕೆಯ...

ತಡ ಮಾಡದೆ ಬಾ ಉರುಳುತಿದೆ ಸಮಯ,
ಒಂದಾಗೋಣ ಬಾ ಕರಗುವ ಮುನ್ನ ಹರೆಯ,
ದೂರಕ್ಕೆ ಸೇರಿಸು ಸಂಶಯದ ತೆರೆಯ,
ಖಾತರಿಯು ಬೇಕಿಲ್ಲ ನಾನೇ ನಿನ್ನ ಇನಿಯ,
ಸಕ್ಕರೆಯ ಉಣಿಸುವೆ ನಾಳಿನ ಬಾಳಿನಲಿ
ಸಹಿಸಿಕೊ ಗೆಳತಿ ನನ್ನೆಲ್ಲ ಪ್ರೀತಿಯ,
ಮತ್ತೆ ದೊರಕದು ನಿನಗೆ ಈ ನನ್ನ ಸಮಯ...

Sunday, September 29, 2013

ಹೋಲಿಕೆ...

ಕೇಳುವವರ್ಯಾರಿಲ್ಲ ಕಣ್ಣುಗಳ ಕಂಪನವ,
ಕೇಳಿಸದೆ ಗೆಳತಿ ನನ್ನೆದೆಯ ಕೂಗು..??
ಆಲಿಸುವ ಕಿವಿಗಳು ಕಿವುಡಾದವೇಕೆ???
ಹೋಲಿಸಲು ಸಿಕ್ಕಿತೇ ಮತ್ತೊಂದು ಮನಸು....????

ಹೋಲಿಕೆಯ ಮಾಡದಿರು ಯಾವುದೇ ವಿಷಯದಲಿ...
ನಾ ಬೇರೆ ಅವ ಬೇರೆ, ಹೋಲಿಕೆಯು ಸಲ್ಲದು...
ಅವನಾಗಿ ಪ್ರೀತಿಸಲು ನಾನು ಅವನಲ್ಲ...
ನಾನು ನಾನಾಗಿ ಪ್ರೀತಿಸುವೆ ನನ್ನ ಮನಸಾರೆ...

ಉಡುಗೊರೆಯ ಕೊಡಲಾರೆ ಬಡವ ನಾನು,
ನಿನ್ನಂದ ಬಣ್ಣಿಸಿ ನಿನ್ನ ಮೆಚ್ಚಿಸಲಾರೆ,
ಮೂಕನಾಗುವೆ ನಾನು ನಿನ್ನ ಕಂಡ ಕ್ಷಣವೇ...
ಕಪಟವಿಲ್ಲದ ಪ್ರೀತಿ ಅರಿತು ಪ್ರೀತಿಸು ಗೆಳತಿ...
ಸಾವಿನಲು ಜೊತೆಬರುವೆ ತುಂಬು ಹೃದಯದಿಂದ...

Thursday, August 15, 2013

ಕಥಾನಾಯಕಿ...

ಮುದ್ದಾದ ಮನಸೊಂದು ಕಾದಿದೆ,
ಮನಬಿಚ್ಚಿ ಹಕ್ಕಿಯಂತೆ ಹಾರಿದೆ,
ಮನಸಿನ ಅಂಗಳಕೆ ಹಾರಿಬಂದು,
ಮನಸೊಳಗೆ ಬರಲು ಯೋಚಿಸುತಿದೆ...

ಒಲವೆಂಬ ಸೌಧವನು ಇಟ್ಟಿಗೆಯಿಲ್ಲದೆ ಕಟ್ಟಿದಳು,
ತಳದ ಪಾಯಕೆ ಪ್ರೀತಿಯ ಸುಧೆ ಹರಿಸಿದಳು,
ಕುಲದ ತಕರಾರು ಎಂದೂ ಬರದಿರಲಿ ಈ ಪ್ರೀತಿಯಲಿ,
ಛಲದೆ ನೆಲೆಯ ಸೇರೋಣ ಒಂದೇ ಮನಸಿನಲಿ,
ಒಲವ ಸೌಧದ ಅರಸಿ ಅರಗಿಣಿ ನೀನೆ,
ಒಲವ ಸವಿಯುವ ನಿನ್ನಿನಿಯ ನಾನೇ...

ಕಥೆಯ ಬರೆದಳು ಕಣ್ಣ ಸನ್ನೆಯಲಿ,
ಕಥಾನಾಯಕಿ ಅವಳು ನನ್ನ ಕನಸಿನಲಿ,
ಕಥೆಯ ಅಂತ್ಯ ಏನೇ ಇರಲಿ,
ಕಥೆಗೆ ನಾಯಕ ನಾನೇ, ಅವಳ ಕನಸಿನಲಿ,
ಕಥೆಯ ಪೂರ್ಣವಿರಾಮ ಅವಳ ಇಚ್ಛೆ....

Sunday, July 21, 2013

ಕ್ಷಣ-ಕ್ಷಣ...

ಹೇಳಬೇಕೆನಿಸಿದೆ ಗೆಳತಿ ಸವಿಯಾದ ಮಾತೊಂದ,
ಕೇಳಲೊಂದು ಕ್ಷಣ ಕಿವಿಗೊಡುವೆಯಾ ನೀನು???
ಕಪ್ಪು-ಬಿಳುಪಿನ ಕನಸಿನಲಿ ಬಣ್ಣಗಳ ಹೋಳಿಯಾಟ,
ಬಣ್ಣಗಳ ಬದುಕಿನಲಿ ಕತ್ತಲೆಯ ಕ್ರೂರ ನೋಟ...

ಕೇಳಬೇಕೆನಿಸಿದೆ ಗೆಳತಿ ನಿನ್ನ ಮನಸಿನ ಮಾತೊಂದ,
ಬಳಿಬರುವೆ ಬಳಿಗೆ ಸೆಳೆವೆ, ಪ್ರೀತಿಸಲು ನೀನು....
ಗುಡುಗು ಸಿಡಿಲುಗಳೆ ತುಂಬಿವೆ ನಿನ್ನ ಮನದಾಳದಲೆಲ್ಲ,
ಮಿಂಚಂತೆ ಮರೆಯಾದೆ ಕಣ್ಣೋಟದಿಂದ....

ನೋಡಬೇಕೆನಿಸಿದೆ ಗೆಳತಿ ನಿನ್ನನೊಂದು ಕ್ಷಣ,
ಇನ್ನೆಷ್ಟು ದಿನ ಈ ತೆರೆಮರೆಯ ಆಟ???
ಸೋತು ಸೊರಗಿದೆ ಮನಸು ನಿನ್ನ ಈ ಆಟದಲಿ,
ಸಾವೊಂದೇ ಸುಖವೆನಿಸಿದೆ ನೀನಿಲ್ಲದ ಪ್ರತಿಘಳಿಗೆ....

Tuesday, July 9, 2013

ಚರಣದಾಸಿ...

ಮಾಸಿದವು ಆಸೆಗಳು ಮೋಸದಾಟದಲಿ,
ಮಸಿಯ ಬಳಿದಿರಿ ನೀವ್ ಮುಗ್ದ ಹೃದಯಕೆ||

ಹಸಿಯ ಜೀವಕೆ ಏಕೆ ಹುಸಿಯ ಉಣ ಬಡಿಸಿದಿರಿ?
ಹಸುವಿನಂತೆಯೇ ಇದ್ದು, ಕಸಿಯ ಮಡಿಲೊಳಗಿಟ್ಟು,
ಕಸಿದುಕೊಂಡಿರವಳ ನಗೆ ಉಸಿರು ನಿಲ್ಲುವವರೆಗೆ||

ಘಾಸಿಯರಿವಿಲ್ಲ ಹುಸಿ ಸಿರಿಯ ಮೋಸದರಸರಿಗೆ,
ನುಸಿಯ ಕೀಟಗಳಂತಾಕ್ರಮಿಸಿ,
ಗಸಿಯ ಮಾಡಿದಿರವಳ ಹೊಂಬಾಳ ಕಣವೆಲ್ಲವನ್ನು||

ಹೊಸಿಲ ದಾಟಿಸಿ ನೀವ್ ಬಸಿರ ಬಗೆವುದು ಸರಿಯೇ?
ದಾಸಿಯಂತೆಣಿಸಿದಿರಿ ಬಾಳ ಹಾದಿಯಲಿ,
ಮಸೆದಿರವಳಾಸೆಗಳ ಅಣು ಅಣುಗಳಾಗಿ||

ಹಸಿಮನದ ಹುಸಿಯರಿಯದ ಮಾನಸಿ,
ಕುಸಿದು ಇಳೆಗಿಳಿದಳು ಆ ಸೌಂದರ್ಯ ರಾಸಿ,
ನಿಸಿಯಲ್ಲೇ ಹುಸಿಯಾದಳು ಆಕೆ, ಚರಣದಾಸಿ...

Thursday, May 9, 2013

ತುಂಟ ಬೆರಳು...


ತೆವಳುತಿದೆ ತೋರ್ಬೆರಳ ತುದಿ
ಅಂಗನೆಯ ಮುಂಗುರುಳ ಬಳಿಗೆ,
ಸುರುಳಿಯಾಗಿಸಿಯದನು ಇಳಿಯುತಿದೆ
ಹೊಳೆವ ಕಣ್ಣುಗಳ ಕಡೆಗೆ...

ಮೀನಾಕ್ಷಿಯವಳ ಕಣ್ಣುಗಳ ಚುಂಬಿಸಲು
ಸದ್ದಿಲ್ಲದೆ ಸಾಗಿದೆ ಅಧರದೆಡೆಗೆ,
ತೊಂಡೆ ತುಟಿಗಳನೊಮ್ಮೆ ಚಿವುಟಿರಲು ಆ ಬೆರಳು,
ಮೇಲೇರಿತು ಅವಳ ಹುಬ್ಬು,
ತುಟಿಗೆ ತುಟಿಯೊತ್ತಿ ಮುತ್ತಿಡಲು ಬರಿಯ ಮೌನ...

ಕೊರಳಿಂದ ಕೆಳಗಿಳಿಯೆ ಬೆರಳು, ಕೇಳಿತು...
ನನ್ನೇಕೆ ಮರೆತೆ ಇನಿಯನೆ? ನಾಗೈದ ಅಪರಾಧವೇನು???
ಹೇಗೆ ಮರೆಯಲೆ ನಿನ್ನ??? ಇದೋ ನಿನಗಾಗಿ
ಮುತ್ತುಗಳ ಹಾರ, ಮತ್ತದೇ ಸ್ನಿಗ್ಧ ಮೌನ...

ಎದೆಗೂಡ ನಡುವೆ ನುಸುಳಿ ನುಗ್ಗಿ
ನಡುವ ತಲುಪಿದೆ ಬೆರಳು,
ಒಂದರಿಂದಾಗದು ಎಂದು ಎರಡು ಕೈಯಲಿ
ನಡುವ ನವಿರಾಗಿ ಹಿಡಿದಿರಲು,
ಮತ್ತದೇ ಮೌನ ಅವಳ ಮೊಗದಲ್ಲಿ...
ಹಿಡಿತ ಬಿಗಿಯಾಗಿಸಿ, ನಾಭಿಗೆ ಬಿಸಿಯುಸಿರ ಸೋಕಿಸಿ,
ನಡುವ ಮಧ್ಯದಲಿ ಮುತ್ತೊಂದ ಮೆತ್ತಗೆ ಕೊಡಲು,
ನಾಚಿ ನುಡಿದಳು ನನ್ನಾಕೆ,
ನಿಲ್ಲಿಸೆಯಾ ಇನಿಯ ತುಂಟ ಬೆರಳಿನಾಟವನಿಂದು???