Google Search

Custom Search

Monday, September 17, 2012

ನಿನ್ನೇ ಪ್ರೀತಿಸುವೆ...


ಸಹ್ಯಾದ್ರಿ ಸಾಲಿನ ಮಧ್ಯದಲಿ,
ಬೆಳ್ಳಿ ಮೋಡಗಳ ತೇರಿನಲಿ,
ಶರಾವತಿಯ ನಿಶ್ಯಬ್ದ ರಾಗದಲಿ,
ಬಿಗಿದಪ್ಪಿ ಹೇಳುವೆ ನಿನ್ನೆ ಪ್ರೀತಿಸುವೆ ಎಂದು
ಹಣೆಗೊಂದು ಮುತ್ತನಿಟ್ಟು..||

ಹಚ್ಚ ಹಸಿರಿನ ವನ ರಾಶಿಯಲಿ,
ನೀಲಾಕಾಶದ ಚಪ್ಪರದ ಅಡಿಯಲಿ,
ಹಕ್ಕಿಗಳ ತಾಳವಾಧ್ಯದಲಿ,
ಕೈ ಹಿಡಿದು ಹೇಳುವೆ ನೀ ನನ್ನವಳೆ ಎಂದು
ಹೂ ಮುಡಿಸಿ, ಕೆನ್ನೆಗೆ ಅರಿಶಿನವ ಹಚ್ಚಿ,
ಹಣೆಗೆ ಮಂಗಳ ಸಿಂಧೂರವನಿಟ್ಟು...||

ಹಾಲ ಬೆಳದಿಂಗಳಿರುಳಲಿ,
ಪ್ರೇಮ ಶರಧಿಯಲೆಗಳ ಏರಿಳಿತದಲಿ,
ಉಸಿರು ಬಿಸಿಯುಸಿರ ಸೇರುವಾ ಕ್ಷಣದಲಿ,
ಕಿವಿಯಲ್ಲಿ ಪಿಸುಗುಡುವೆ ಈ ಹುಟ್ಟು ನನಗಾಗಿ ಎಂದು
ತುಟಿಮೇಲೆ ತುಟಿಯನಿಟ್ಟು,
ಮನಸೊಳಗೆ ಮನಸನಿಟ್ಟು...||

Sunday, September 9, 2012

ಕೊಲ್ಲುತಿವೆ ಕಣ್ಣುಗಳೆರಡು...


ಕವಿಯ ಮನಸನು ಕೊಲ್ಲುತಿವೆ ಕಣ್ಣುಗಳೆರಡು,
ಅರಿಯಲಾರೆನು ಹೊಳಪಿನ ಮೂಲವೇನೆಂದು,
ತಡೆಯಲಾರೆನು ನಾ ಸೆಳೆತದ ಆಳವನು,
ಮನದ ಭಾರವನಿಳಿಸಲು ಒಮ್ಮೆ ಕಣ್ಸನ್ನೆ ಮಾಡೆ ಗೆಳತಿ...

ಬೆಲ್ಲದ ಪಾಕದಲು ಕಲ್ಲು ಸಿಗಬಹುದು,
ಸುಳ್ಳಿಲ್ಲವೇ ಗೆಳತಿ ನನ್ನ ಪ್ರೀತಿಯಲಿ,
ಕಲ್ಲು ಮನದವರೂ ಕರಗಿ ನೀರಾದರು,
ಹೂವಂತೆ ಸೂಕ್ಷ್ಮ, ಜೇನಹನಿ ಈ ಪ್ರೀತಿ ಸವಿಯೇ ಗೆಳತಿ...

ಆಘಾತವಾಗಿದೆ ಒಂದು ಸಲ ಪುಟ್ಟ ಹೃದಯಕೆ,
ಬಲವಿಲ್ಲ ನನ್ನಲಿ ಮತ್ತೊಂದು ಆಘಾತ ತಡೆಯಲು,
ಬಿಟ್ಟು ಹೋಗದಿರು ನನ್ನ ಯಾವ ಸಂದರ್ಭದಲು,
ಬಿಟ್ಟು ಹೋದರೆ ಬಿಡುವೆನೀಜೀವ, ನನ್ನುಸಿರು ನೀನು ಗೆಳತಿ...

Saturday, September 1, 2012

ಹನಿ...


ಕಾರ್ಮೋಡಗಳೇ ತುಂಬಿವೆ ನಡೆವ ದಾರಿಯಲೆಲ್ಲ,
ಕಣ್ಣ ಹನಿಗಳಾಗಿ ಒಮ್ಮೆ ಸುರಿದರೆ ಕ್ಷೇಮ,
ಒಮ್ಮೆ-ಮತ್ತೊಮ್ಮೆ ಹನಿ ಹನಿಯಾಗಿ ಸುರಿದರೆ,
ಹೇಗೆ ತಡೆಯಲು ಸಾಧ್ಯ ಮುದ್ದು ಮನಕೆ...??

ಪ್ರತಿಯೊಂದು ಹನಿಯು ಹೇಳುತಿದೆ ಒಂದೊಂದು ಕಥೆಯನು,
ಕಥೆಗಳೇ ತುಂಬಿದ ಬಾಳಲ್ಲಿ ನಗೆಯ ಮಾತೆಲ್ಲಿ,
ಹನಿಗಳೊಂದೊಂದಾಗಿ ಚದುರದೆ, ಎಲ್ಲ ಒಟ್ಟಾಗಿ
ಮಹಾ ಪ್ರವಾಹವಾಗಿ ಒಮ್ಮೆಲೆ ಬಂದಪ್ಪಿದರೆ,
ಮುಕ್ತಿಯ ಕಥೆಯೆಂದು ಮುನ್ನುಗ್ಗಿ ಹೋಗುವೆನು ಹೆಮ್ಮೆಯಿಂದ...

ಅಣುವ ಗಾತ್ರದ ಹನಿಯು ಪ್ರಳಯವನೆ ತರಬಹುದು,
ತೃಣದ ಮೇಲಿನ ಹನಿಯು ಪ್ರಾಣವನೆ ಇರಿಬಹುದು,
ಹನಿ ಹನಿಯಾಗಿ ಬಂದು ಪ್ರತಿಕ್ಷಣ ಕೊಲ್ಲದಿರು,
ಸಿದ್ಧನಿರುವೇನು ನಾ ಒಟ್ಟಾಗಿ ಬಾ, ಒಮ್ಮೆಲೇ
ಸೀಳಿಬಿಡು ನನ್ನನು, ಖುಷಿಯಾಗಿ ಸಾಯುವೆನು ಶಾಂತಿಯಿಂದ...