Google Search

Custom Search

Tuesday, May 31, 2011

ಮನಸ್ಸು...


ನಿನ್ನಂತರಂಗವನು
ನೋಡಲೆನಗಿಲ್ಲ ದಿವ್ಯ ದೃಷ್ಟಿ,
ಆ ದೇವನು ಕೂಡ
ಅರಿಯಲಸಾಧ್ಯ ಹೆಣ್ಣಿನಮನ,
ಬಡ ಜೀವ ನಾನು, ಹೇಗೆ ಅರಿಯಲೇ ಗೆಳತಿ ನಿನ್ನ ಮನಸ್ಸು???

ಮತ್ಸ್ಯ ಕನ್ಯೆಯೇ ನೀನು?
ಹಿಂಬರುವೆ ಬಾಲೆ ನಿನ್ ಹೆಜ್ಜೆ ಹಿಡಿದು,
ಸರ್ಪ ಕನ್ಯೆಯೇ ನೀನು?
ಚಿತ್ತಾರ ಬಿಡಿಸುವೆ ನಿನ್ ಹೆಜ್ಜೆಯಲಿ ನಡೆದು,
ವೃಕ್ಷ ಕನ್ಯೆಯೇ ನೀನು?
ಸೇರುವೆ ನಿನ್ನ ಗಾಳಿಯ ದಿಕ್ಕಲಿ ನಡೆದು,
ಏನೆಲ್ಲಾ ಮಾಡಿದರು ಅರಿಯಲಾರೆನು ಗೆಳತಿ ನಿನ್ನ ಮನಸ್ಸು||

ಕಾಮಧೇನುವೆ ನೀನು?
ಕಾಮಿಸುವೆ ಒಂದು ವರ ಮನದೆ ನೆನೆದು,
ಸಿಂಹಿಣಿಯೆ ನೀನು?
ಮೃಗಾರಾಜನಾಗುವೆನು ನಿನ್ನೆಡೆಗೆ ಬಂದು,
ಕೋಗಿಲೆಯೆ ನೀನು?
ಕವಿಯಾಗಿ ಬೆರೆಸುವೆ ರಾಗದೊಂದಿಗೆ ಪದವ ಬರೆದು,
ಏನೆಲ್ಲಾ ಮಾಡಿದರು ಅರಿಯಲಾರೆನು ಗೆಳತಿ ನಿನ್ನ ಮನಸ್ಸು||

Monday, May 30, 2011

ಉಸಿರು...


ಬೆಳದಿಂಗಳಿರುಳಲ್ಲಿ, ಬೆಳ್ಳಿ ಮೋಡದ ಅಂಚಿನಲ್ಲಿ|
ತೆಳುಗಾಳಿ ಸುಳಿದಿರಲು ಹಿತವಾದ ಧರಣಿಯಲಿ||
ತಿಳಿ ಹಾಲ ಸಾಗರದಿ ಏರಿಳಿವ ಅಲೆ ಅಲೆಯಲಿ|
ನಿನ್ನೊಲುಮೆಯ ಸವಿಯ ಸವಿದೆ ಗೆಳತಿ..||

ಹುಚ್ಚು ಹಿಡಿಸುವ ಆ ನಿನ್ನ ಕಣ್ಣುಗಳು|
ಕಿಚ್ಚು ಹೊತ್ತಿಸಿದೆ ಮನದ ಮನೆಯೊಳಗೆ||
ಕೊಚ್ಚಿ ಹಾಕಿದೆ ಇನ್ನೋರ್ವ ಬಾಲೆಯ ಬಯಕೆ,
ಹಚ್ಚ ಹಸಿರನೆ ತೊಟ್ಟ ಬೆಡಗಿ|
ನಿನ್ನೊಲುಮೆಯ ಬಯಸಿ ಕಾದಿರುವೆ ಬಾರೆ ಗೆಳತಿ..||

ಮನದಾಳಾದೊಳಗೆ, ಅಡಿಯಿಂದ ಮುಡಿವರೆಗೆ|
ಕಣ್ಣೀರ ತೆರೆಯೊಳಗೆ, ಎದೆ ಬಡಿವವರೆಗೆ||
ನುಡಿಮುತ್ತಿನೊಳಗೆ, ಉಸಿರಿರುವವರೆಗೆ|
ನಿನ್ ಹೆಸರ ಬಿಗಿದಿಡುವೆ ಓ ಪ್ರೀತಿ!! ನೀ ನನ್ನ ಒಡತಿ...||