ಬಾಳೆಯ ತೋಟದಲಿ ಕಂಡ
ಬಾಳೆದಿಂಡಿನ ಬಾಲೆ,
ಬೆಳ್ಳಿ ಬೆಳಕಲಿ ಹೊಳೆದು
ಬಳುಕುತಿರುವೆ ನೀ ಯಾರಿಗಾಗಿ??
ಕೊಳದ ಕಮಲದೆ ಕಣ್ಣು,
ಪಳ-ಪಳನೆ ಮಿಂಚುತಿದೆ,
ಕೊಲ್ಲುವಂತಿದೆ ಕಣ್ಣಂಚಿನ ಮಿಂಚು,
ಕಣ್ಣಂಚಿನ ಸಂಚಿನಾಟವು ಯಾರಿಗಾಗಿ??
ತೊಂಡೆ ಹಣ್ಣಿನ ತುಟಿಯ,
ತಿಂದು ರುಚಿಸುವ ಬಯಕೆ,
ನೂರೊಂದು ಮುತ್ತುಗಳ ಸಾಲಾಗಿ ಜೋಡಿಸಿಹೆ,
ಸಾಲ ಮುಂದಿರುವ ಕೆಂದುಟಿಯು ಯಾರಿಗಾಗಿ??
ಶಿಲೆಯ ಒಳಗಣ ಕಲೆಯ
ಕೆತ್ತಿ ತೋರಿಸುವಂತೆ,
ನಿನ್ನಂದ ತೋರುತಿಹ ಕಲೆಯೊಡತಿ
ಶಿಲಾಬಾಲಿಕೆಯ ಭಂಗಿ ಯಾರಿಗಾಗಿ??
ಹಸಿರ ಕಾನನದಲ್ಲಿ
ಒಂಟಿ ಮರವೊಂದಕ್ಕೆ
ಅಪ್ಪಿ ನಿಂತಿರುವ ಬಳ್ಳಿ ನೀ,
ಆ ಒಲವಿನ ಅಪ್ಪುಗೆ ಯಾರಿಗಾಗಿ??