Google Search

Custom Search

Saturday, July 28, 2012

ಗರ್ವ....


ಮಾಯವಾಗಿದೆ ಕಿರುನಗೆ ಮೊಗದ ಅಂಗಳದಿಂದ,
ಮರೆಯಾಗುತಿದೆ ಒಲುಮೆ ಮನಕೆ ಒಲಿದವರಿಂದ,
ನಲಿಯುತಿದೆ ದೂರದಲ್ಲೊಂದು ಒಂಟಿ ತಾರೆ
ನನ್ನಂತೆಯೇ ನೀನು, ಸನಿಹ ಕಾಣ್ವರು ಆಪ್ತರು
ಕೋಟಿ ಮೈಲುಗಳ ದೂರದಿಂದ,
ಕಾಲನೆ ನೀನೆಷ್ಟು ಕ್ರೂರ...???

ಉರುಳುತಿದೆ ಕಾಲ ನಾಳೆಯ ಬಳಿಗೆ,
ಹೊರಳುತಿದೆ ಮನ ಬಾಧ್ಯತೆಗಳೆಡೆಗೆ,
ಅರಳುತಿದೆ ಪ್ರೀತಿ ನವಜೀವದೆಡೆಗೆ,
ಪಾತಾಳವೇತಕೆ ಸೇರಿತು ಮೈತ್ರಿ?
ಬಯಸಿಯೋ, ಬಯಸದೆಯೋ ಬಂದ
ಬದಲಾವಣೆಗಳಿಂದ,
ಕಾಲನೆ ನೀನೆಷ್ಟು ಕ್ರೂರ...???

ನನ್ನದೆನ್ನುವ ಭಾವ ನಿನ್ನಲ್ಲಿ ನುಗ್ಗಿರಲು,
ನನ್ನ ನೋವನು ನಾನು ಯಾರಲ್ಲಿ ಬಿಚ್ಚಿಡಲಿ?
ನನ್ನ ನಲಿವನು ನಾನು ಯಾರ ಜೊತೆ ಹಂಚಲಿ?
ನನ್ನ ನಲ್ಮೆಯ ಜೀವ, ನನ್ನೊಡನೆ ನೀನಿರಲು,
ನರರಧಿಪತಿ ನಾರಾಯಣನೆ ಮುಂಬರಲು,
ನೇರ ನೋಟವ ಭಿತ್ತಿ, ಮುಳ್ಳಿನ ಹಾದಿಯಲು
ಮೆಟ್ಟಿ ನಡೆಯವೆ ನಾನು ಗರ್ವದಿಂದ...

Thursday, July 26, 2012

ಮಿಲನ...


ಅನವರತ ಅನುಸರಿಸಿ,
ಉಸಿರೆಲ್ಲ ಉಣಬಡಿಸಿ,
ಕನಸಲ್ಲೇ ಕನವರಿಸಿ,
ಮುದುಡಿದ್ದ ಮನತಣಿಸಿ,
ನಿನ್ನ ಹಿಂದೆ ಬಂದೆ ಗೆಳತಿ.....

ನೆನಪುಗಳು ನಳನಳಿಸಿ,
ನೆನಪಲ್ಲೇ ನನ್ನಳಿಸಿ,
ನೆನಪಾಗಿ ನಿನ್ನುಳಿಸಿ,
ಮರುಗಿದ್ದ ಮನಸವೆಸಿ,
ನಿನಗಾಗಿ ಕಾದೆ ಗೆಳತಿ.....

ನಿನ್ನಾಸೆ ನಿಗ್ರಹಿಸಿ,
ಒಲವನ್ನು ಒಳಗಿಳಿಸಿ,
ಹೃದಯದಲಿ ಹನಿಸುರಿಸಿ,
ತಂಗಾಳಿ ತಂಪುಣಿಸಿ,
ತಡೆಹಿಡಿದ ಆಸೆಗಳ ಚೆಲುವಿಂದ ಚಿಮ್ಮಿಸುತ,
ನನ್ನ ಹೃದಯ ಸೇರೆ ಗೆಳತಿ...

Tuesday, July 3, 2012

ಆಷಾಡ...


ಆಷಾಡದ ತಂಗಾಳಿ ಆಸೆಗಳ ಚಿಮ್ಮಿಸಲು,
ನವಜೋಡಿಯು ಅನುರಾಗದ
ಅಲೆಗಳನು ಅವಿತಿಟ್ಟು,
ವಿರಹದ ಬೇಗೆಯಲಿ ಪರಿಪರಿಯಲಿ ಬೆಂದು
ಶ್ರಾವಣದ ಆಗಮಕೆ ಕಾದಿರುವ
ಬಗೆಯನೇನೆಂದು ಹೇಳಲೇ ಒಲವ ಗೆಳತಿ... :)

ಆಷಾಡವಾಗಲಿ ವೈಶಾಖವಾಗಲಿ,
ಚೈತ್ರ ಶ್ರಾವಣಗಳೇ ಆಗಲಿ,
ಹುಣ್ಣಿಮೆಯು ಬರದೆಹೋಗುವುದೇನೆ?
ಸಾಗರವು ಉಕ್ಕದಿರುವುದೇನೆ?
ಪ್ರಕೃತಿಯ ಚಕ್ರದಲಿ ಅವಕಿಲ್ಲದ ಅಂತರ,
ಬೇಕೇ ನಮ್ಮಿಬ್ಬರ ನಡುವೆ? ಹೇಳೆಲೇ ಒಲವ ಗೆಳತಿ...

ಅವರಿವರ ಮಾತಿಗೆ ಕಿವಿಗೊಡದೆ,
ಹಿರಿಯರ ಸಲಹೆಯ ಸ್ವೀಕರಿಸಿ,
ಅರಿತ ಜೀವದ ಜೊತೆಗೆ,
ಬೆರೆಸಿ ಒಲವಿನ ಸವಿಯ,
ಬಡಿಸಿದ ಭೋಜನವ ಮಿತವಾಗಿ ಭುಜಿಸಿ,
ಹಿತವಾದ ಅನುರಾಗ ಅನುಭವಿಸಿ
ಪ್ರಕೃತಿಯಲೊಂದಾದರೆ ಸಾಲದೇ? ಹೇಳೆಲೇ ಒಲವ ಗೆಳತಿ...

Sunday, June 24, 2012

ಕಳೆದೆ ಕಳೆದಿರುಳ...


ಕಳೆದೆ ಕಳೆದಿರುಳ
ಕನಸಲಿ ಕಂಡ
ಕಮಲನಯನೆಯ
ಕರಕಮಲಗಳಲ್ಲಿ....

ಕಳೆದ ಕ್ಷಣವನೆ ಕನವರಿಸಿ
ಕಾಲಾಂತರಾಳದಲಿ
ಕರಗಿ ಕಾದಿರುವೆ ನಾ...
ಕೊರಳಂಚಿನವರೆಗು
ಕೋಪವನು ಕೆರಳಿಸದೆ
ಕಷ್ಟವಾದರೂ ಸರಿಯೇ
ಕಣ್ಣೆದುರು ನಿಲ್ಲೆ ಗೆಳತಿ...

ಕಹಿಯ ಕಲ್ಪನೆಗಳೆಲ್ಲ
ಕೊಸರಲ್ಲು ಇರದಿರಲಿ
ಕಣ್ಣ ನೇರದ ನೋಟ
ಕಳಶದ ಕಡೆಯಿರಲಿ,
ಕನಸ ಕನ್ನಿಕೆಯೆಂದು
ಕಣ್ಣೆದುರು ನಿಲ್ಲುವಳೆಂದು
ಕಾತರದಿ ಕಾದಿವುವೆ,
ಕೇಳೆ ಗೆಳತಿ ನಾ ಕಲ್ಪನಾವಿಹಾರಿ.... :)

Saturday, May 5, 2012

ಹೊಸತು...


ಹೊಸತಲ್ಲಿ ಮಾತ್ರವೆ
ಹೊಸದು ಎಲ್ಲವು...
ಏನಾದರಾಗಲಿ
ಯಾವುದಾದರು ಇರಲಿ,
ಹೊಸತಲ್ಲಿ ಮಾತ್ರವೇ
ಹೊಸದು ಈ ಜಗದಲ್ಲಿ...

ಹೊಸತು ಗೆಳೆತನವಿಂದು,
ಹಳಸಿ ಹಳತಾಗುವುದು ಮರುಕ್ಷಣ...

ಹೊಸತು ಪ್ರೇಮವು ಇಂದು,
ಮನಸವೆಸಿ ಹಳತಾಗುವುದು ಮರುಘಳಿಗೆ...

ಹೊಸತು ವಿವಾಹವು ಇಂದು,
ಬೆವರ್ಹರಿಸಿ ಹಳತಾಗುವುದು ಮರುದಿನ...

ಹೊಸತು ವಸ್ತುವು ಇಂದು,
ಮಾಸಿ ಹಳತಾಗುವುದು ನಾಳೆ...

ಇಂದಿನ ಎಲ್ಲ ಹೊಸತುಗಳು,
ಮುಂದೊಮ್ಮೆ ಹಳತುಗಳೇ...
ಇಂದು ಮುಂದಿನ ನಡುವೆ
ಮಂದಗತಿಯಲಿ ಚಲನೆ...
ಒಂದೇ ದಿನದಲಿ ಎಲ್ಲವನು ಬಯಸಿ,
ಬೆಂದು ಬರಡಾಗದಿರು,
ಹೊಸತ ಅರಸಿರುವ
ನವ ಕಲ್ಪನಾವಿಹಾರಿ... ||

ಕಾಣೆಯಾದವರು...


ಕಾಣೆಯಾದವರೆ ಎಲ್ಲರು
ಕಣ್ಣೆದುರಿಗಿರುವರು...
ಕೂಗಳತೆಯ ದೂರದಲಿದ್ದು
ಕೂಗಿದರು ಕೇಳದ
ಕಿವುಡರವರು....

ಕಣ್ಣು ಹೇಳುವ ಸತ್ಯ
ಮನಸು ಒಪ್ಪದು ನಿತ್ಯ
ಕಾಣೆಯಾದವರೆ ಎಲ್ಲರು
ಕಣ್ಣೆದುರಿಗಿರುವರು
ಕಾಣೆಯಾಗಿರುವರು
ಮನದಾಳದ ಮೆಲುಕಿನಿಂದ...

ಕಣ್ಣೊಂದು ಹೇಳುತಿದೆ
ಕಿವಿಯೊಂದು ಕೇಳುತಿದೆ
ತುಟಿಯೊಂದು ನುಡಿಯುತಿದೆ
ಒಪ್ಪಲಾರದು ಮನಸು
ತಪ್ಪ ಕ್ಷಮಿಸಲು ಒಮ್ಮೆ...
ಕಾಣೆಯಾದವರೆ ಎಲ್ಲರು
ಕಣ್ಣೆದುರಿಗಿರುವರು...

Friday, May 4, 2012

ಸಾಧಕ....


ಅರ್ಥವಾಗದ ಮಾತು
ಎಷ್ಟು ಆಡಿದರೇನು??

ವ್ಯರ್ಥವಾಗುವ ಸಮಯ
ಮತ್ತೆ ಪಡೆಯುವೆಯೇನು??

ಸ್ವಾರ್ಥವಿಲ್ಲದ ಮನಸ
ಬೆಳೆಸಿ ಪೋಷಿಸಲೇನು?

ಇಷ್ಟಾರ್ಥ ಸಾಧಿಸಲು
ಕಷ್ಟ ಅನುಭವಿಸುವೆಯೇನು?

ಕರ್ತವ್ಯ ನಿಷ್ಟೆಯಲಿ
ಕಾಯಕವ ಮುಗಿಸುವೆಯೇನು?

ಅನರ್ಥವಾಗಿಸದೆ ಬದುಕ
ಮುಂದೆ ಸಾಗಿಸು ನೀನು...

ಸಮಯ ಸಾಧಕನಾಗು,
ಅನರ್ಥಗಳ ಅರ್ಥವನರಿತು,
ಸ್ವಾರ್ಥವನು ವ್ಯರ್ಥವಾಗಿಸಿ,
ಕಷ್ಟದಿಂದಲಿ ಇಷ್ಟಾರ್ಥ ಸಾಧಿಸಿ
ಜನಿಸಿದ ಜೀವ ಕೊಂಚವಾದರೂ
ಕರ್ತವ್ಯ ಪಾಲಿಸಿ.. ಸಮಯ ಸಾಧಕನಾಗು...||