Google Search

Custom Search
Showing posts with label gunda. Show all posts
Showing posts with label gunda. Show all posts

Sunday, September 29, 2013

ಹೋಲಿಕೆ...

ಕೇಳುವವರ್ಯಾರಿಲ್ಲ ಕಣ್ಣುಗಳ ಕಂಪನವ,
ಕೇಳಿಸದೆ ಗೆಳತಿ ನನ್ನೆದೆಯ ಕೂಗು..??
ಆಲಿಸುವ ಕಿವಿಗಳು ಕಿವುಡಾದವೇಕೆ???
ಹೋಲಿಸಲು ಸಿಕ್ಕಿತೇ ಮತ್ತೊಂದು ಮನಸು....????

ಹೋಲಿಕೆಯ ಮಾಡದಿರು ಯಾವುದೇ ವಿಷಯದಲಿ...
ನಾ ಬೇರೆ ಅವ ಬೇರೆ, ಹೋಲಿಕೆಯು ಸಲ್ಲದು...
ಅವನಾಗಿ ಪ್ರೀತಿಸಲು ನಾನು ಅವನಲ್ಲ...
ನಾನು ನಾನಾಗಿ ಪ್ರೀತಿಸುವೆ ನನ್ನ ಮನಸಾರೆ...

ಉಡುಗೊರೆಯ ಕೊಡಲಾರೆ ಬಡವ ನಾನು,
ನಿನ್ನಂದ ಬಣ್ಣಿಸಿ ನಿನ್ನ ಮೆಚ್ಚಿಸಲಾರೆ,
ಮೂಕನಾಗುವೆ ನಾನು ನಿನ್ನ ಕಂಡ ಕ್ಷಣವೇ...
ಕಪಟವಿಲ್ಲದ ಪ್ರೀತಿ ಅರಿತು ಪ್ರೀತಿಸು ಗೆಳತಿ...
ಸಾವಿನಲು ಜೊತೆಬರುವೆ ತುಂಬು ಹೃದಯದಿಂದ...

Thursday, May 9, 2013

ತುಂಟ ಬೆರಳು...


ತೆವಳುತಿದೆ ತೋರ್ಬೆರಳ ತುದಿ
ಅಂಗನೆಯ ಮುಂಗುರುಳ ಬಳಿಗೆ,
ಸುರುಳಿಯಾಗಿಸಿಯದನು ಇಳಿಯುತಿದೆ
ಹೊಳೆವ ಕಣ್ಣುಗಳ ಕಡೆಗೆ...

ಮೀನಾಕ್ಷಿಯವಳ ಕಣ್ಣುಗಳ ಚುಂಬಿಸಲು
ಸದ್ದಿಲ್ಲದೆ ಸಾಗಿದೆ ಅಧರದೆಡೆಗೆ,
ತೊಂಡೆ ತುಟಿಗಳನೊಮ್ಮೆ ಚಿವುಟಿರಲು ಆ ಬೆರಳು,
ಮೇಲೇರಿತು ಅವಳ ಹುಬ್ಬು,
ತುಟಿಗೆ ತುಟಿಯೊತ್ತಿ ಮುತ್ತಿಡಲು ಬರಿಯ ಮೌನ...

ಕೊರಳಿಂದ ಕೆಳಗಿಳಿಯೆ ಬೆರಳು, ಕೇಳಿತು...
ನನ್ನೇಕೆ ಮರೆತೆ ಇನಿಯನೆ? ನಾಗೈದ ಅಪರಾಧವೇನು???
ಹೇಗೆ ಮರೆಯಲೆ ನಿನ್ನ??? ಇದೋ ನಿನಗಾಗಿ
ಮುತ್ತುಗಳ ಹಾರ, ಮತ್ತದೇ ಸ್ನಿಗ್ಧ ಮೌನ...

ಎದೆಗೂಡ ನಡುವೆ ನುಸುಳಿ ನುಗ್ಗಿ
ನಡುವ ತಲುಪಿದೆ ಬೆರಳು,
ಒಂದರಿಂದಾಗದು ಎಂದು ಎರಡು ಕೈಯಲಿ
ನಡುವ ನವಿರಾಗಿ ಹಿಡಿದಿರಲು,
ಮತ್ತದೇ ಮೌನ ಅವಳ ಮೊಗದಲ್ಲಿ...
ಹಿಡಿತ ಬಿಗಿಯಾಗಿಸಿ, ನಾಭಿಗೆ ಬಿಸಿಯುಸಿರ ಸೋಕಿಸಿ,
ನಡುವ ಮಧ್ಯದಲಿ ಮುತ್ತೊಂದ ಮೆತ್ತಗೆ ಕೊಡಲು,
ನಾಚಿ ನುಡಿದಳು ನನ್ನಾಕೆ,
ನಿಲ್ಲಿಸೆಯಾ ಇನಿಯ ತುಂಟ ಬೆರಳಿನಾಟವನಿಂದು???

Thursday, July 26, 2012

ಮಿಲನ...


ಅನವರತ ಅನುಸರಿಸಿ,
ಉಸಿರೆಲ್ಲ ಉಣಬಡಿಸಿ,
ಕನಸಲ್ಲೇ ಕನವರಿಸಿ,
ಮುದುಡಿದ್ದ ಮನತಣಿಸಿ,
ನಿನ್ನ ಹಿಂದೆ ಬಂದೆ ಗೆಳತಿ.....

ನೆನಪುಗಳು ನಳನಳಿಸಿ,
ನೆನಪಲ್ಲೇ ನನ್ನಳಿಸಿ,
ನೆನಪಾಗಿ ನಿನ್ನುಳಿಸಿ,
ಮರುಗಿದ್ದ ಮನಸವೆಸಿ,
ನಿನಗಾಗಿ ಕಾದೆ ಗೆಳತಿ.....

ನಿನ್ನಾಸೆ ನಿಗ್ರಹಿಸಿ,
ಒಲವನ್ನು ಒಳಗಿಳಿಸಿ,
ಹೃದಯದಲಿ ಹನಿಸುರಿಸಿ,
ತಂಗಾಳಿ ತಂಪುಣಿಸಿ,
ತಡೆಹಿಡಿದ ಆಸೆಗಳ ಚೆಲುವಿಂದ ಚಿಮ್ಮಿಸುತ,
ನನ್ನ ಹೃದಯ ಸೇರೆ ಗೆಳತಿ...

Tuesday, July 3, 2012

ಆಷಾಡ...


ಆಷಾಡದ ತಂಗಾಳಿ ಆಸೆಗಳ ಚಿಮ್ಮಿಸಲು,
ನವಜೋಡಿಯು ಅನುರಾಗದ
ಅಲೆಗಳನು ಅವಿತಿಟ್ಟು,
ವಿರಹದ ಬೇಗೆಯಲಿ ಪರಿಪರಿಯಲಿ ಬೆಂದು
ಶ್ರಾವಣದ ಆಗಮಕೆ ಕಾದಿರುವ
ಬಗೆಯನೇನೆಂದು ಹೇಳಲೇ ಒಲವ ಗೆಳತಿ... :)

ಆಷಾಡವಾಗಲಿ ವೈಶಾಖವಾಗಲಿ,
ಚೈತ್ರ ಶ್ರಾವಣಗಳೇ ಆಗಲಿ,
ಹುಣ್ಣಿಮೆಯು ಬರದೆಹೋಗುವುದೇನೆ?
ಸಾಗರವು ಉಕ್ಕದಿರುವುದೇನೆ?
ಪ್ರಕೃತಿಯ ಚಕ್ರದಲಿ ಅವಕಿಲ್ಲದ ಅಂತರ,
ಬೇಕೇ ನಮ್ಮಿಬ್ಬರ ನಡುವೆ? ಹೇಳೆಲೇ ಒಲವ ಗೆಳತಿ...

ಅವರಿವರ ಮಾತಿಗೆ ಕಿವಿಗೊಡದೆ,
ಹಿರಿಯರ ಸಲಹೆಯ ಸ್ವೀಕರಿಸಿ,
ಅರಿತ ಜೀವದ ಜೊತೆಗೆ,
ಬೆರೆಸಿ ಒಲವಿನ ಸವಿಯ,
ಬಡಿಸಿದ ಭೋಜನವ ಮಿತವಾಗಿ ಭುಜಿಸಿ,
ಹಿತವಾದ ಅನುರಾಗ ಅನುಭವಿಸಿ
ಪ್ರಕೃತಿಯಲೊಂದಾದರೆ ಸಾಲದೇ? ಹೇಳೆಲೇ ಒಲವ ಗೆಳತಿ...

Monday, February 6, 2012

ನೆಪ...


ಕಾಲ ಕಿರುಬೆರಳ ಉಗುರ ಅಡಿಯಲ್ಲಿ,  
ಅಡಗಿರುವ ಸೌಂದರ್ಯ ರಾಶಿಯೇ,
ಉಗುರ ಕಡಿಯುವ ನೆಪದೆ
ಅಣು ಅಣುವಾಗಿ ಸವಿಯುವ ಬಯಕೆ ಎನ್ನ ತುಂಟ ಮನಕೆ...

ನುಣುಪು ಹಿಮ್ಮಡಿಯ ಮೇಲೆ,
ಕಾಣುವ ಕಣಕಾಲೇ,
ಧೂಳು ತೆಗೆಯುವ ನೆಪದೆ
ಕಾಲ್ಗೆಜ್ಜೆ ತೊಡಿಸುವ ಬಯಕೆ ಎನ್ನ ತುಂಟ ಮನಕೆ...

ಬಳುಕೊ ಸಿಂಹಿಣಿಯ ನಡುವೆ,
ನಡುವೆ ಏನಿಟ್ಟಿರುವೆ??
ಏನಿದೆಯೊ ಹುಡುಕುವ ನೆಪದೆ
ಉಡುಪೊಂದ ಉಡಿಸುವ ಬಯಕೆ ಎನ್ನ ತುಂಟ ಮನಕೆ...

ಹಂಸಪಕ್ಷಿಯ ಕೊರಳೆ,
ಕಂಠದಲು ಗಂಟಿಲ್ಲವೇನೇ?
ಆಳವ ಅಳೆವ ನೆಪದೆ
ವಜ್ರಹಾರವ ತೊಡಿಸುವ ಬಯಕೆ ಎನ್ನ ತುಂಟ ಮನಕೆ...

ಕಣ್ಣು ಕಮಲದ ಮೊಗ್ಗು, ಮೂಗು ಸಂಪಿಗೆ,
ತುಟಿಗಳೇನೆಂದು ಹೇಳಲೇ?
ಹೋಲಿಕೆಯ ಹೋಲಿಸುವ ನೆಪದೆ
ತುಟಿಗೆ ಮುತ್ತಿಡುವ ಬಯಕೆ ಎನ್ನ ತುಂಟ ಮನಕೆ...

ಮಂದಾರ ಪುಷ್ಪದ ಮೊಗದ, ಮಂದ ಮತಿ ಮುಗ್ದೆ,  
ನಗುವ ಮೇಲಿನ ನಾಸಿಕ, ನಯನಗಳ
ನೋಡುತಿಹ ನೊಸಲಿನ ನಟ್ಟ ನಡು ಮಧ್ಯದಲಿ,
ಸೌಭಾಗ್ಯದ ಸಿಂಧೂರವಿಡುವ ಬಯಕೆ ಎನ್ನ ಮುಗ್ದ ಮನಕೆ||

Monday, January 16, 2012

ಏನ ಹೇಳಲಿ...?



ಏನ ಹೇಳಲಿ ನಾನು...?? ಎನ್ನ ಒಡಲಿನ ಬೆಂಕಿ ಸುಡುತಿದೆ ನರ-ನಾಡಿಗಳೆಲ್ಲವನು, ತಂಗಾಳಿಯಾಗಿ ತಬ್ಬುವೆಯಾ ಒಮ್ಮೆ ನೀನು|| ಏನ ಹೇಳಲಿ ನಾನು...?? ತಣಿಸುವುದ ಮರೆತು ತಂಗಾಳಿ, ಬಿಸಿಯುಸಿರಲಿ ಬೆರೆತು ಆಗಿದೆ ಬಿಸಿಗಾಳಿ, ಮುಂಜಾನೆ ಮಂಜಾಗಿ ಮೈಸೇರು ಒಮ್ಮೆ ನೀನು|| ಏನ ಹೇಳಲಿ ನಾನು...?? ಮಂಜು ಮೈ ಸೇರಿದರು ಇಳಿಯದಾಗಿದೆ ಕಾವು, ಎನ್ನೊಡಲಲ್ಲೇ ಅಡಗಿರು ಸದಾ ನೀನು||

Friday, January 13, 2012

ಯಾರಿಗಾಗಿ..??


ಬಾಳೆಯ ತೋಟದಲಿ ಕಂಡ
ಬಾಳೆದಿಂಡಿನ ಬಾಲೆ,
ಬೆಳ್ಳಿ ಬೆಳಕಲಿ ಹೊಳೆದು
ಬಳುಕುತಿರುವೆ ನೀ ಯಾರಿಗಾಗಿ??

ಕೊಳದ ಕಮಲದೆ ಕಣ್ಣು,
ಪಳ-ಪಳನೆ ಮಿಂಚುತಿದೆ,
ಕೊಲ್ಲುವಂತಿದೆ ಕಣ್ಣಂಚಿನ ಮಿಂಚು,
ಕಣ್ಣಂಚಿನ ಸಂಚಿನಾಟವು ಯಾರಿಗಾಗಿ??

ತೊಂಡೆ ಹಣ್ಣಿನ ತುಟಿಯ,
ತಿಂದು ರುಚಿಸುವ ಬಯಕೆ,
ನೂರೊಂದು ಮುತ್ತುಗಳ ಸಾಲಾಗಿ ಜೋಡಿಸಿಹೆ,
ಸಾಲ ಮುಂದಿರುವ ಕೆಂದುಟಿಯು ಯಾರಿಗಾಗಿ??

ಶಿಲೆಯ ಒಳಗಣ ಕಲೆಯ
ಕೆತ್ತಿ ತೋರಿಸುವಂತೆ,
ನಿನ್ನಂದ ತೋರುತಿಹ ಕಲೆಯೊಡತಿ
ಶಿಲಾಬಾಲಿಕೆಯ ಭಂಗಿ ಯಾರಿಗಾಗಿ??

ಹಸಿರ ಕಾನನದಲ್ಲಿ
ಒಂಟಿ ಮರವೊಂದಕ್ಕೆ
ಅಪ್ಪಿ ನಿಂತಿರುವ ಬಳ್ಳಿ ನೀ,
ಆ ಒಲವಿನ ಅಪ್ಪುಗೆ ಯಾರಿಗಾಗಿ??

Thursday, January 12, 2012

ನೋಡಬೇಕೆನಿಸಿದೆ...


ಕನಸೆಂಬ ಊರಲ್ಲಿ,
ಕನವರಿಸಿದ ಮನದಲ್ಲಿ,
ಮಿನುಗುತಿಹ ತಾರೆ ನೀನು,
ಕಣ್ಮುಂದೆ ಬಾರೆ ಗೆಳತಿ||

ಕನಸಲ್ಲೇ ನೋಡಿ ನೋಡಿ,
ಕಹಿನೆನಪು ಮೂಡಿ,
ಮನಸಿಂದು ಬಾಡಿದೆ,
ಕಣ್ಮುಂದೆ ಬಾರೆ ಗೆಳತಿ||

ಮುದ್ದು ಮಲ್ಲಿಗೆ ಹೂವೆ,
ಮನದಲ್ಲೆಲ್ಲಾ ಬರಿ ನೋವೆ,
ಮರೆತರು ಮರೆಯಲಾರೆ ನಿನ್ನ,
ಕಣ್ಮುಂದೆ ಬಾರೆ ಗೆಳತಿ||

ಮರಳುಗಾಡಲಿ ಇನ್ನು,
ಬೇಯಲಾರೆನು ನಾನು,
ನೋಡಬೇಕೆನಿಸಿದೆ ನಿನ್ನ,
ಕಣ್ಮುಂದೆ ಬಾರೆ ಗೆಳತಿ||

Thursday, December 29, 2011

ನಲಿದಾಡುತಿರುವೆ...


ನಗುವ ಮರೆತ ಯುಗದಲಿ
ಕಾದ ಕಡಲಾಗಿದ್ದೆ ನಾನು,
ಅಂದದರಸಿಯ ಚೆಂದದ ನಗುವ ಕಂಡೆ,
ಕಾದು ಕುಳಿತಿದ್ದ ಸಮಯವ ಮರೆತು
ನಿನ್ನ ನಗೆಯಲ್ಲೇ ನಲಿದಾಡುತಿರುವೆ...||

ಕಡಲೊಡಲಿನ ಕಪ್ಪೆಚಿಪ್ಪಲಿ
ಸ್ವಾತಿ ಮಳೆಹನಿಯ ಮುತ್ತು,
ಮುತ್ತು ಮುತ್ತುಗಳೊಂದೊಂದು
ಮತ್ತೊಂದರೊಡನೆ ಬೆರೆತ
ನಗುವ ಮುತ್ತಿನ ಹಾರದಲೆ ನಲಿದಾಡುತಿರುವೆ...||

ತಿಳಿ ಹಾಲ ಕೊಳದಲ್ಲಿ,
ತಡ ಜಾವದಲಿ ಮಿಂದು
ಮಡಿಯುಡುಗೆಯಲಿ ಬಂದ
ಶ್ವೇತ ಸುಂದರಿ ನಿನ್ನ
ಹಾಲ್ಗಲ್ಲದ ನಗುವಲ್ಲೇ ನಲಿದಾಡುತಿರುವೆ...||

Friday, December 23, 2011

ಕನಸು...


ನಂದು ಇಂದುಗಳೆಲ್ಲಾ
ಎಂದೋ ಕಂಡ ಕನಸು,
ಮುಂದು ಯಾರೆಂದು
ಕಾಣಬೇಕಿದೆ ಇಂದು ಕನಸು ||

ಹಿಂದಾದರಾಗಲಿ
ಇಂದಾದರಾಗಲಿ
ಮುಂದಾದರಾಗಲಿ
ಕಂಡ ಕನಸೆಂದೆಂದು ಮಧುರ ||

ಹಿಂದೆ ನಂದು ಬಂದಳು
ಇಂದು ಇಂದು,
ಮುಂದೆ ಬರಬಹದು ವಂದು
ಕಂಡ ಕನಸೆಂದೆಂದು ಮಧುರ ||

ನಂದು ನನ್ನವಳಲ್ಲ
ಇಂದು ಇರಲು ಬರಲಿಲ್ಲ,
ಮುಂದೆ ಬರುವವಳ ಬಗ್ಗೆ ತಿಳಿದಿಲ್ಲ
ಕಂಡ ಕನಸೆಂದೆಂದು ಮಧುರ ||

ಹಿಂದೆ ತಡೆದವರಿಲ್ಲ,
ಇಂದಿನ ಅರಿವು ಎಮಗಿಲ್ಲ,
ಮುಂದೆ ತಡೆಯುವರಿಲ್ಲ,
ಕನಸು ನಿನ್ನದು ಗೆಳೆಯ,
ಕನಸ ಕಾಣಲು ಬೇಕಿಲ್ಲ ಕಾಸು,
ಸವಿಯ ಸವಿಯಲು ಮಾತ್ರ ಕನಸು
ಕನಸೇ ಜೀವನವಲ್ಲ
ಕಂಡ ಕನಸೆಂದೆಂದು ಮಧುರ ||

ಕಣ್ಣು ...


ಪದವೇ, ಪದವಿಯೇತಕೆ ಬೇಕೇ
ಪ್ರೀತಿ ಪಾರಾಯಣಕೆ?
ನೀನೊಬ್ಬಳೆ ಸಾಕು, ಪದಗಳ ರಾಶಿ
ಅಡಗಿರಲು ನಿನ್ನ ಕಂಗಳಲಿ ||

ಕಣ್ಣನೋದುವ ಕಲೆಯ
ಅರಿತಿರುವ ಪದವೇ,
ಸಪ್ತ ಸಾಗರಗಳೆ
ಉಬ್ಬು ತಗ್ಗುಗಳು ನಿನ್ನ ಕಂಗಳಲಿ ||

ಕಪ್ಪು ಬಿಳುಪುಗಳೆರಡು
ಬರಿಯ ಬಣ್ಣಗಳಲ್ಲ,
ಕಪ್ಪು ಬಿಳುಪುಗಳೇ
ಹಗಲು ರಾತ್ರಿಗಳೆನಗೆ ನಿನ್ನ ಕಂಗಳಲಿ ||

Wednesday, December 21, 2011

ಹುಸಿಮುನಿಸು...


ಅನಿಸುತಿದೆ ಏಕೋ ಗೆಳತಿ
ಹುಸಿಮುನಿಸು ನಿನ್ನದೆಂದು,
ಮತ್ತೆ ಮತ್ತೆ ನೋಡಬೇಕೆನಿಸಿದೆ
ಆ ನಿನ್ನ ಹುಸಿನಗುವನಿಂದು||

ತಡಮಾಡದೆ ಬಾ ಗೆಳತಿ
ಮಿಲನ ಮಹೋತ್ಸವಕೆಂದು,
ಗೌರಿಶಂಕರವೀವಿರಹ ತುಡಿಯುತಿದೆ
ತುದಿಗಾಲಲಿ ನಿನ್ನ ಸೇರಲೆಂದು||

ಒಂದು ಮಧುರ ಕ್ಷಣದಿ
ಎಂದೂ ಕಾಣದ ಚಿತ್ತಾರ,
ಕಂಡೆ ನಾ ಎನ್ನಂತರಂಗದಿ
ಹುಸಿಮುನಿಸ ಮುರಿಯೆಲೆ ಮುದ್ದು ಗೆಳತಿ||


ಸರಸ ವಿರಸಗಳೆರಡು
ಒಲವ ಅವಳಿಗಳು,
ಉಳಿದ ತೊಳಲಾಟಗಳು
ಸುಮಧುರ ಕೋಮಲ ಕುಸುಮಗಳು
ಹುಸಿಮುನಿಸ ಮುರಿಯೆಲೆ ಮುದ್ದು ಗೆಳತಿ||

Tuesday, December 20, 2011

ಏಕಾಂತ...


ಬೆಳದಿಂಗಳ ನಡು ರಾತ್ರಿಯಲಿ,
ನಿನ್ನ ನಡುವಿನ ಮಡಿಲಲ್ಲಿ,
ನಡುವೆ ಅಂತರವಿಲ್ಲದೆ
ಏಕಾಂತದಲ್ಲಿ ನಾನು-ನೀನು||

ಆಗಸದ ತಾರೆಗಳು ಬೆರಳ ತುದಿಯಲ್ಲಿ,
ಒಣಗಿದೆಲೆಗಳ ಮೃದು ಹಾಸಿನಲ್ಲಿ,
ತಂಗಾಳಿ ತಲೆದೂಗಿಸುವ ಬಿಸಿಯುಸಿರ ಶಾಖದಲಿ,
ಹರಿವ ನೀರಂತೆ ಬಳುಕುವ ನೀರೆ
ಏಕಾಂತದಲ್ಲಿ ನಾನು-ನೀನು||

ಕರಗುವ ಮುಂಜಾನೆ ಮಂಜಲ್ಲಿ,
ಕರಗಿರುವೆ ನಾನು ನಿನ್ನಲ್ಲಿ,
ಸವಿಯುವ ನಿನ್ನೊಲವ ಸವಿಯಲ್ಲಿ,
ಇಡೀ ವಿಶ್ವ ಮರೆಯುವೆ, ಮರೆಸುವೆ
ಏಕಾಂತದಲ್ಲಿ ನಾನು-ನೀನು||

ಏಕಾಂಗಿಯ ಏಕಾಂತ...


ಹಸಿರ ಕಾನನದ ನಡುವಲ್ಲಿ,
ನಟ್ಟ ನಡು ರಾತ್ರಿಯಲಿ,
ಮೈ ಕೊರೆವ ಚಳಿಯಲ್ಲಿ,
ಬಿರುಗಾಳಿಯ ಅರಿವಿಲ್ಲ ಗೆಳತಿ,
ಏಕಾಂಗಿಯ ಏಕಾಂತದಲ್ಲಿ||

ತಾರೆಗಳ ಎಣಿಸುವು ಖುಷಿಯಿಲ್ಲ,
ಒಣಗಿದೆಲೆಗಳ ಶಬ್ದ ಹಿತವಿಲ್ಲ,
ಮಿತವಾಗಿ ಬೀಸುತಿಹ ತಂಗಾಳಿ ತಂಪಿಲ್ಲ,
ಹರಿವ ನದಿ ನೀರಾಗಿ ಉಳಿದಿಲ್ಲ ಗೆಳತಿ,
ಏಕಾಂಗಿಯ ಏಕಾಂತದಲ್ಲಿ||

ಮುಂಜಾನೆ ಮಂಜು ಕಾರುತಿದೆ ಕಾವು,
ನೆನಪುಗಳ ನೆನದ ಮನಕೆ ನೋವು,
ನಿನಗಾಗಿ ಕಾದ ಸೂರ್ಯೋದಯಗಳೆಲ್ಲ ಕಹಿಬೇವು,
ನಿದ್ರೆಗಳಿಲ್ಲದ ರಾತ್ರಿ, ದೇಹ ಬಯಸಿದೆ ಸಾವು, ಗೆಳತಿ,
ಏಕಾಂಗಿಯ ಏಕಾಂತದಲ್ಲಿ||

ಸವಿ...


ಕಡಲ ತಡಿಯಲಿ ಕಾದಿರುವೆ ಗೆಳತಿ,
ಓಡೋಡಿ ಬಂದು ಎನ್ನ ಅಡಿಗೆರಗದೆ,
ಎದೆಗಪ್ಪಿ ಕೂರುವೆಯಾ ಒಮ್ಮೆ ನೀನು...??

ಬೆಳದಿಂಗಳಿರುಳಲ್ಲಿ, ತಿಳಿಯ ತಂಗಾಳಿ,
ಕಡಲ ಅಲೆಗಳ ತೆಳು ಸ್ಪರ್ಶದಲಿ,
ಕೈ ಹಿಡಿದು ನಡೆಯುತಾ,
ಒಲವ ಸವಿಯೋಣ ಒಲವ ಒಡತಿ...

ದಡದ ಮಡಿಲಲ್ಲಿ,
ಮಡಿಗೊಂಡ ಬಗೆಯಲ್ಲಿ,
ಅಡಿಗಡಿಗೆ ಹೊರಳಾಡಿ,
ಏಕಾಂತ ಸವಿಯೋಣ ಗೆಳತಿ... :)