Google Search

Custom Search

Thursday, March 14, 2013

ಹನಿ...


ಮೊದಲ ಮಳೆಯ ಮೊದಲ ಹನಿಯೇ,
ಕೆನ್ನೆ ಮೇಲೆ ಕ್ಷಣವು ಹೊಳೆದು,
ಮನದ ಆಳಕೆ ಮೆಲ್ಲನಿಳಿದು,
ತೊದಲ ಪ್ರೀತಿಗೆ ಹುಟ್ಟು ನೀಡಿದೆಯಲ್ಲೇ,
ವಿವರಣೆಯನಾರು ಹೇಳ್ವರು ನನ್ನ ಪುಟ್ಟ ಮನಸಿಗೆ...

ಮನದೆ ಇಳಿದ ಮೊದಲ ಹನಿಯೇ,
ಮೊಳೆತ ಜೀವಕೆ ಉಸಿರ ನೀಡು,
ಉಸಿರಿಗೊಂದು ಹೆಸರ ಹೇಳು,
ಹೊಸ ಭಾವದ ಪಿಸು ಮಾತಿಗೆ,
ಸೋತಿರುವುದು ನನ್ನೆದೆಯು,
ಹೆಸರಿನ ಗಾಢಾರ್ಥ ಹೇಳು ನನ್ನ ಪುಟ್ಟ ಮನಸಿಗೆ...

ನಿನ್ನ ತುಟಿಯ ಜೇನ ಹನಿಯು,
ಸವಿಯುವಾಸೆ ಹಗಲಿರುಳು,
ಸೋತ ಎದೆಗೆ ಸ್ವಂತವಾಗಿ,
ಚಿಂತೆ-ಸಂತೆ ದೂರ ಮಾಡಿ,
ಅಂತರಾಳದೊಲವಿನಿಂದ,
ಮಧುವನದಲಿ ಮಧು ಉಣಿಸು ನನ್ನ ಪುಟ್ಟ ಮನಸಿಗೆ...

Saturday, February 16, 2013

ಪ್ರೀತಿಯ ಓಲೆ...



ನಿನ್ನ ಮೊಗ ನೋಡಲಾರೆನು ನಾನು,
ದೂರವಿರು ನನ್ನಿಂದ...
ಕರಗಿ ಕೆಳಗಿಳಿಯೇ ಕಂಗಳಂಚಿಂದ
ಕಣ್ಣೀರ ಹನಿಯಾಗಿ ಮನದಾಳದಿಂದ....

ಕಣ್ಣ ಮುಚ್ಚಲು ನಾನು,
ನನ್ನೆದರು ನೀನು,
ಬೇಡವೆಂದೆಷ್ಟು ಸಲ ದೂಡಲಿ ನಿನ್ನ,
ಬೇಡನಂತೇಕೆ ಬೇಟೆಯಾಡುವೆ ನನ್ನ,
ಬೇಡಿಕೊಂಡರು ಕರುಣೆಬಾರದೆ ನಿನಗೆ???
ಬಿಡುಗಡೆಯ ನೀಡೆನಗೆ ಚೆಲುವೆ,
ನಿನ್ನ ಮೋಹ ಜಾಲದ ವ್ಯೂಹದಿಂದ....

ನೊಂದು ಬೆಂದಿರುವೆ ನಾನು,
ಇಂದು ನಾಳೆಗಳ ಅರಿವಿಲ್ಲದೆ,
ಒಂದುಸಲವಾದರು ಹೇಳು ಪ್ರೀತಿಯಲಿ,
"ನೀ ನನಗೆ ಇಷ್ಟ"ವೆಂದು.....
ಅಷ್ಟೇ ಸಾಕೆನ್ನ ಪುಟ್ಟ ಹೃದಯಕೆ,
ಎಷ್ಟೇ ಜನುಮಗಳೆ ಸಾಗಲಿ,
ಕಾಯುವೆನು ನಿನಗಾಗಿ ತೆರೆದ ಮನಸಿಂದ,
ಸೇರಿಕೊಳ್ಳವೆ ನಿನ್ನ ಮುಗ್ದ ಪ್ರೇಮದಿಂದ...


Sunday, January 27, 2013

ಪ್ರಕೃತಿ...


ಆ ಊರಿನ ಕಡಲ ತೀರ,
ಮರಳಿ ಸೆಳೆಯುತಿದೆ ತನ್ನೆಡೆಗೆ,
ಹಾರಿ ಹೋಗಲೇ ನಾನು,
ಉರುಳಿ ಹೋಗಲೇ ನಾನು,
ನಡೆದು ಹೋಗಲೇ ನಾನು,
ತಿಳಿಯದೆ ತಡವರಿಸಿದೆ ನನ್ನ ಮನಸು...

ಎಂಥ ಸೆಳೆತವೇ ನಿನ್ನದು,
ನೀಲಿ ಕಂಗಳ ಮಿಂಚು ನಡಿಗೆಯಲಿ,
ಹಾರೋ ಹಕ್ಕಿಗಳೇ ಹುಬ್ಬು ಸೂರ್ಯಾಸ್ತದಲಿ,
ತಿಳಿಹಾಲ ಮೈಬಣ್ಣ ನಿನ್ನಲೆಯಲಿ,
ಹಸಿರ ರಾಶಿಯ ಕಂಡೆ ನಿನ್ನ ಮೈಸಿರಿಯಲಿ,
ಮತ್ತೆ ಮತ್ತೆ ಕಾಡುವೆ ಚೆಲುವೆ ಯಾರೇ ನೀನು?
ಆಳದಲಿ ಹುಡುಕಿದರು ತಿಳಿಯದಾಗಿದೆ ನಿನ್ನ ಹೆಸರು...

ಎಂಥ ಸೆಳೆತವೇ ನಿನ್ನದು,
ಮುಂಜಾವು ಮೂಡುತಿರೆ ಕೆನ್ನೆ ಕೆಂಪು,
ಮುಸ್ಸಂಜೆ ಹೊತ್ತಿನಲಿ ಮೈಯೆಲ್ಲ ತಂಪು,
ಕೊರೆವ ಚಳಿಯಲ್ಲೂ ಮೈ ಬಿಸಿಯಾಗಿಸುವೆ,
ಸುಡುವ ಬಿಸಿಲಲ್ಲೂ ಮೈ ತಂಪಾಗಿಸುವೆ,
ಹುಣ್ಣಿಮೆಯ ರಾತ್ರಿಯಲಿ ಕೂಗಿ ಕರೆಯುವೆ,
ಯಾರೆಂದು ಹೇಳಲು ನಿನಗೇನೆ ತೊಂದರೆ?
ಒಳಗೊಳಗೆ ಒಲವಾಗಿಸಿದ ಚೆಲುವೆ, ತಿಳಿದು
ನಲಿದೆನು ನಾನಿಂದು, ಪ್ರಕೃತಿ ನಿನ್ನ ಹೆಸರು||

Sunday, December 23, 2012

ಸುಳಿ...


ಸುಳಿದಾಡದಿರು ಗೆಳತಿ ಎನ್ನೆದೆಯ ಅಂಗಳದಲಿ,
ಸುಳಿವು ನೀಡದೆಯೆ ಬಂದು ಸೇರಿದೆ ನನ್ನೊಳಗೆ,
ಸುಳಿಯೊಳಗೆ ಸಿಲುಕಿಸಿಯೇಕೆ ದೂರ ಸರಿದೆ???

ಸೆಳೆವೆ ಕಣ್ಣುಗಳೆರಡು ಆ ನಿನ್ನ ಮೊಗದಲಿ,
ಹೊಳೆವ ಕಣ್-ಕಾಂತಿಯನೇನೆಂದು ಬಣ್ಣಿಸಲಿ,
ಮಳೆ, ಮಿಂಚು ಸಿಡಿಲುಗಳೆಲ್ಲ ಆ ಕಣ್ಣುಗಳಂಚಿನಲಿ,
ಇಳೆಗಿಳಿದು ಪ್ರೀತಿಸಿದೆ ಆ ಜೋಡಿ ಕಂಗಳಿಗಾಗಿ,
ಸುಳಿಯೊಳಗೆ ಸಿಲುಕಿಸಿಯೇಕೆ ದೂರ ಸರಿದೆ????

ಹಲವಾರು ದಿನರಾತ್ರಿಗಳ ಕನಸಿನಲಿ,
ಒಲವ ಪ್ರತಿಮೆಯನಿಟ್ಟು ಮನದ ಗುಡಿಯಲಿ,
ನಲಿವ ದುಂಡು ಮಲ್ಲಿಗೆಯ ಹೂಗಳಲಿ,
ಅರ್ಚಿಸಿ ಪೂಜಿಸಿದೆ ಗೆಳತಿ ನಿನ್ನ ಪ್ರತಿಮೆಯನು,
ಸುಳಿಯೊಳಗೆ ಸಿಲುಕಿಸಿಯೇಕೆ ದೂರ ಸರಿದೆ????

Wednesday, November 21, 2012

ಚಲಿಸೋ ಮೋಡಗಳು...


ಜಾರಿಹೋದ ಸಮಯದಲ್ಲಿ ಹಾರಿಹೋದ ಹಕ್ಕಿಗಳು,
ಓಡಿಬರುವ ಸಮಯದಲಿ ಮೋಡಿಮಾಡೋ ಹಕ್ಕಿಗಳು,
ನೋಡಿ ನೋಡಿ ಸಾಕಾಯಿತು ಈ ಸಮಯದ ಆಟಗಳು,
ಹೋದವೆಷ್ಟೋ ಬಂದವೆಷ್ಟೋ ಲೆಕ್ಕ ಇತ್ತ ಭೂಪನಾರು?
ಎಲ್ಲವೂ ಕಣ್ಣಮುಂದೆ ಬರಿಯ ಚಲಿಸೋ ಮೋಡಗಳು... ಚಲಿಸುವಾ ಮೋಡಗಳು...||

ನೋಡೋ ನೋಟ ಬೇರೆ ಬೇರೆ, ಇರುವುದೆರಡು ಕಣ್ಣುಗಳು,
ಹಿಂದೆ ಒಂದು, ಮುಂದೆ ಒಂದು ಮಾತನಾಡೋ ಹಕ್ಕಿಗಳು,
ಬಿಟ್ಟ ಕೆಟ್ಟ, ಕೆಟ್ಟು ಬಿಟ್ಟ, ಬಿಟ್ಟು ಕೆಟ್ಟ ಅನುಭವಗಳು,
ಆದವೆಷ್ಟೋ ಹೋದವೆಷ್ಟೋ ಲೆಕ್ಕ ಇತ್ತ ಭೂಪನಾರು?
ಎಲ್ಲವೂ ಕಣ್ಣಮುಂದೆ ಬರಿಯ ಚಲಿಸೋ ಮೋಡಗಳು... ಚಲಿಸುವಾ ಮೋಡಗಳು...||

ಧುಮುಕುವಾ ಜರಿ-ತೊರೆಗಳು, ಹರಿಯುವಾಗ ನದಿಗಳು,
ಒಮ್ಮೆ ಹಾರಿ, ಒಮ್ಮೆ ತೆವಳೋ ಚಾಣಕ್ಷ ಹಕ್ಕಿಗಳು,
ಕಲಿತ ಮರೆತ, ಕಲಿತು ಮರೆತ, ಮರೆತು ಕಲಿತ ಪಾಠಗಳು,
ಕಾಲನೊಬ್ಬ ಮಾಯಗಾರ ಕಲಿಸುವುವಂತ ಪಾಠಗಳು,
ಕಲಿತದೆಷ್ಟೋ, ಮರೆತದೆಷ್ಟೋ ಲೆಕ್ಕ ಇತ್ತ ಭೂಪನಾರು?
ಎಲ್ಲವೂ ಕಣ್ಣಮುಂದೆ ಬರಿಯ ಚಲಿಸೋ ಮೋಡಗಳು... ಚಲಿಸುವಾ ಮೋಡಗಳು...||

Thursday, November 1, 2012

ಕರುನಾಡು...


ಕಟುವಾದ ಕಲ್ಲಿನ ಕಂಬದಲು,
ಹಿತವಾದ ನಾದ ಹೊಮ್ಮುವುದು
ನಮ್ಮ ಕರುನಾಡಿನಲಿ....

ಬೆಟ್ಟ-ಗುಡ್ಡಗಳೆ ಅಡಗಿರಲು
ಸಹ್ಯಾದ್ರಿಯೊಡಲಿನಲಿ, ಹಸಿರೆ ಉಸಿರಾಗಿದೆ
ನಮ್ಮ ಕರುನಾಡಿನಲಿ....

ಕಾವ ತಡೆದರು ತಾಯಿ ಕಾವೇರಿ,
ಬೇಡಿದ ಭಟ್ಟಂಗಿಗಳಿಗೆಲ್ಲಾ ನೀರುಣಿಸುವಳು
ನಮ್ಮ ಕರುನಾಡಿನಲಿ...

ಸುಡು ಬಿಸಿಲೊಳು ಬೆಂದರು ನಮ್ಮ ಜನ,
ಬರುವ ಬೇವರ್ಸಿಗಳಿಗೆ ಅನ್ನ-ಆಶ್ರಯವ ಕೊಡುವರು
ನಮ್ಮ ಕರುನಾಡಿನಲಿ...

ಕಂಪು ಕನ್ನಡ ಗಾಳಿ ಉಸಿರೊಳಗೆ ಬೆರೆತಿರಲು,
ಕರುನಾಡೇ ನನ್ನ ನೆಲೆ, ಕಾವೇರಿ ತಾಯಿ,
ಕನ್ನಡವೇ ತಾಯ್ನುಡಿಯು,  ಕನ್ನಡತಿ ಎನ್ನೊಡತಿ,
ಮರೆತು ನಡೆದರೆ ನಾನು, ಮಸಣದಲಿ
ಮಸಿಯಾಗಿಸು ನನ್ನ, ತಾಯೆ ಕನ್ನಡಾಂಬೆ...

Sunday, October 28, 2012

ಮತ್ತೆ ವಾಲುತಿದೆ ಮನಸು...


ಮತ್ತೆ ವಾಲುತಿದೆ ಮನಸು ನಿನ್ನೆಡೆಗೆ,
ಏನು ಮೋಡಿಯೋ ಆ ಜೋಡಿ ಕಂಗಳಲಿ,
ಎತ್ತ ನೋಡಬೇಕೆನಿಸಿದರು ನನಗೆ,
ಸುತ್ತಲೂ ಆ ಎರಡು ಕಣ್ಣುಗಳೇ,
ಸತ್ತು ಬದುಕುತಿದೆ ಮನಸು ಮುತ್ತನಿಡಲು
ಆ ಜೋಡಿ ಕಂಗಳಿಗೆ.....

ನಡು ದಾರಿಯಲೂ ಕಾಣದಾಗಿದೆ ದಿಕ್ಕು,
ಕಡಲಂತೆ ಕಾಣುತಿದೆ ನಡೆವ ಹಾದಿ,
ಕಿಡಿಯೊಂದು ಹೊತ್ತಿದೆ ನಿನ್ನ ಕಣ್ಣುಗಳಿಂದ,
ಸುಡುತಿದೆ ಎನ್ನೊಡಲ ನುಡಿಯಲಾದೆನು ನಾ,
ಕೊಡುವೆನೊಂದು ಸಿಹಿ ಮುತ್ತನು
ಆ ಜೋಡಿ ಕಂಗಳಿಗೆ.....

ಮೆಲ್ಲ ಮೆಲ್ಲನೆ ನಲ್ಲನ ಕೊಲ್ಲುತಿವೆ ಕಣ್ಣುಗಳು,
ಮಲ್ಲಿಗೆಯ ಪರಿಮಳವು ಮಾಯವಾಗಿದೆ,
ಎಲ್ಲಿರುವೆನೋ ನಾನು ಅರಿವಿಲ್ಲವಾಗಿದೆ,
ಅಲ್ಲಿ ನೋಡಿದ ಆ ಜೋಡಿ ಕಣ್ಣುಗಳು,
ಎಲ್ಲ ಜಗವನು ಮರೆಸಿ ತನ್ನತ್ತ ಸೆಳೆದಿವೆ,
ಒಲ್ಲೆಯೆಂದರು ಒಮ್ಮೆ ಮುತ್ತನಿಡುವೆ
ಆ ಜೋಡಿ ಕಂಗಳಿಗೆ....